ಬೆಂಗಳೂರು: ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ ಆರೋಪದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಾಲಿವುಡ್ ನಟ ಸಿದ್ಧಾಂತ್ ಕಪೂರ್, ಪೂರ್ವ ವಿಭಾಗದ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಪರ ವಕೀಲರು ಸಿದ್ಧಾಂತ್ ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಪೊಲೀಸ್ ಠಾಣೆಯ ಜಾಮೀನು ಕೊಡುವಂತಹ ಅಪರಾಧವಾಗಿದ್ದರಿಂದ ಕಾನೂನು ರೀತಿಯಲ್ಲೇ ಎಲ್ಲವೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸತತ ಎರಡು ದಿನಗಳಿಂದ ಪೊಲೀಸ್ ವಿಚಾರಣೆಯನ್ನು ಎದುರಿಸುತ್ತಿರುವ ಬಾಲಿವುಡ್ ನಟ ಸಿದ್ಧಾಂತ್, ತಾನು ಹಲವು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಹಲವಾರು ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದೇನೆ. ಯಾವತ್ತೂ ತಾವು ಡ್ರಗ್ಸ್ ಸೇವಿಸಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಾನು ಪ್ರಜ್ಞಾಪೂರ್ವಕವಾಗಿ ಯಾವತ್ತೂ ಡ್ರಗ್ಸ್ ಸೇವಿಸಿಲ್ಲ. ಮೊನ್ನೆ ನಡೆದ ಪಾರ್ಟಿಯಲ್ಲೂ ನಾನು ಡ್ರಗ್ಸ್ ಸೇವಿಸಿಲ್ಲ. ಪೊಲೀಸರು ಹೇಳುತ್ತಿರುವ ಆರೋಪಿಗಳಲ್ಲಿ ನನ್ನ ಹೆಸರು ಇದೆ. ಹಾಗಾಗಿ ಸಿಗರೇಟ್ ಅಥವಾ ಮದ್ಯದಲ್ಲಿ ಏನಾದರೂ ಡ್ರಗ್ಸ್ ಹಾಕಿಕೊಟ್ಟಿರಬಹುದಾ ಗೊತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.