ಪಿಎಸ್ ಐ ಅಕ್ರಮ ನೇಮಕಾತಿ: ಬ್ಯಾಡರಹಳ್ಳಿ ಠಾಣೆ ಪಿಎಸ್ ಐ ಬಂಧನ

Prasthutha|

ಬೆಂಗಳೂರು: ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆಯನ್ನು ತೀವ್ರ ಗೊಳಿಸಿರುವ ಸಿಐಡಿ ಅಧಿಕಾರಿಗಳು, ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ ಐ)ನೊಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಅಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

- Advertisement -


ಮಾಗಡಿಯ ಚಿಕ್ಕಕಲ್ಯ ಗ್ರಾಮದ ಹರೀಶ್ 2019ನೇ ಬ್ಯಾಚ್ನ ಪಿಎಸ್ ಐ ಆಗಿದ್ದು, ಕಳೆದ ಮೂರು ವರ್ಷಗಳಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಕರಣ ಸಂಬಂಧ ಸಿಐಡಿ ಪೊಲೀಸರು ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 14 ಮಂದಿ ಅಭ್ಯರ್ಥಿಗಳ ಪೈಕಿ ದಿಲೀಪ್ ಬಂಧನವಾಗಿತ್ತು. ಈತ ನೀಡಿದ ಸುಳಿವಿನ ಮೇರೆಗೆ ಪಿಎಸ್ ಐ ಹರೀಶ್ ರನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.


ದಿಲೀಪ್ ಚಿಕ್ಕಕಲ್ಯ ಗ್ರಾಮದವನಾಗಿದ್ದು, ಹಲವು ವರ್ಷಗಳಿಂದ ಪಿಎಸ್ ಐ ಹರೀಶ್ ಗೆ ಪರಿಚಿತನಾಗಿದ್ದ. ವಾಮಮಾರ್ಗದಲ್ಲಿ ಪಿಎಸ್ ಐ ಆಗುವ ಸಲುವಾಗಿ ಲಕ್ಷಾಂತರ ರೂಗಳನ್ನು ಹರೀಶ್ ನೀಡಿರುವುದಾಗಿ ಸಿಐಡಿ ಮುಂದೆ ಹೇಳಿಕೆ ನೀಡಿದ್ದ. ಹರೀಶ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದು ಖಚಿತವಾದ ಸಾಕ್ಷಾಧಾರಗಳನ್ನು ಕಲೆ ಹಾಕಿ ಎರಡು ದಿನಗಳ ಹಿಂದೆಯೇ ಪಿಎಸ್ ಐ ಹರೀಶ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ಸಿಐಡಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.



Join Whatsapp