ಚೆನ್ನೈ: ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರು ಸಂದರ್ಶನವೊಂದರಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ ಕೋಪಗೊಂಡು ಕ್ಯಾಮೆರಾ ಬಂದ್ ಮಾಡುವಂತೆ ಸೂಚಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕಾನೂನು ಉಲ್ಲಂಘನೆಯ ಕುರಿತಂತೆ ನಿರೂಪಕ ಸದ್ಗುರುವನ್ನು ಪ್ರಶ್ನಿಸಿದ್ದು, ಈ ಪ್ರಶ್ನೆಯಿಂದ ವಿಚಲಿತರಾದ ಜಗ್ಗಿ ವಾಸುದೇವ್ ಯಾನೆ ಸದ್ಗುರು ಸಿಡಿಮಿಡಿಗೊಂಡು ಕ್ಯಾಮೆರಾ ಬಂದ್ ಮಾಡುವಂತೆ ಹೇಳಿದ್ದಾರೆ.
ಸದ್ಗುರು ನೇತೃತ್ವದ ಇಶಾ ಫೌಂಡೇಶನ್ ಸಂಸ್ಥೆಯ ಯೋಜನೆಗಳಿಗೆ ಪರಿಸರ ಅನುಮತಿಯನ್ನು ಏಕೆ ಪಡೆದಿಲ್ಲ ಎಂದು ‘ಬಿಬಿಸಿ ತಮಿಳು’ ವಾಹಿನಿಯ ನಿರೂಪಕ ಕೇಳಿದ ಪ್ರಶ್ನೆಗೆ ಸದ್ಗುರು ಸಿಟ್ಟಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸದ್ಗುರು ಸಿಟ್ಟಾದರೂ ತನ್ನ ಪ್ರಶ್ನೆಯಿಂದ ಹಿಂದೆ ಸರಿಯದ ಸಂದರ್ಶಕ “ನಿಮಗೆ ಪರಿಸರದ ಬಗ್ಗೆ ತುಂಬಾ ಕಾಳಜಿ ಇದ್ದರೆ, ಈ ಕಟ್ಟಡಗಳನ್ನು ಪ್ರಾರಂಭಿಸುವ ಮೊದಲು ನೀವು ಸರಿಯಾದ ಅನುಮತಿ ತೆಗೆದುಕೊಳ್ಳಬಾರದಿತ್ತಾ?” ಎಂದು ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
ಈ ವೇಳೆ ಸಂದರ್ಶಕನನ್ನು ಸುಮ್ಮನಿರುವಂತೆ ಸೂಚಿಸಿದ ಸದ್ಗುರು, ಸರ್ಕಾರದ ಕೆಲಸ ಅವರೇ ಮಾಡಲಿ, ನೀವು ಏಕೆ ಮಾಡುತ್ತಿದ್ದೀರಿ ಎಂದು ಮರು ಪ್ರಶ್ನೆ ಹಾಕಿ ಸಂದರ್ಶಕನ ಪ್ರಶ್ನೆಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ.
ಸಂದರ್ಶಕ ತನ್ನ ಪ್ರಶ್ನೆಯಲ್ಲೇ ಬಲವಾಗಿ ನಿಂತಾಗ, ” ನನ್ನ ಮಾತುಗಳನ್ನು ಗಮನವಿಟ್ಟು ಕೇಳು. ದೇಶದ ಪ್ರತಿಯೊಂದು ಕಾನೂನನ್ನು ಅನುಸರಿಸಲಾಗಿದೆ. ಇದ್ದ ಸಣ್ಣ ಪುಟ್ಟ ತಕರಾರುಗಳನ್ನು 20 ವರ್ಷಗಳ ಹಿಂದೆಯೇ ಸರಿ ಮಾಡಿದ್ದೇವೆ. ನಿಮ್ಮ ನಾನ್ಸೆನ್ಸ್ ನೀವು ಹೇಳುತ್ತಿರುವಿರಿ . ಕ್ಯಾಮೆರಾವನ್ನು ಆಫ್ ಮಾಡಿ, ಸಾಕು ಎಂದು ಸದ್ಗುರು ಸಿಡಿಮಿಡಿಗೊಂಡರು.
ಈ ವೇಳೆ, ಸದ್ಗುರು ಅವರ ಜೊತೆಗಿದ್ದ ಜನರು ಮೂರು ಕ್ಯಾಮೆರಾಗಳನ್ನು ಬಲವಂತವಾಗಿ ಬಂದ್ ಮಾಡಿಸಿದರು ಎಂದು BBC ನ್ಯೂಸ್ ಹೇಳಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜಗ್ಗಿ ವಾಸುದೇವ್ ಪತ್ರಕರ್ತನ ಒಂದು ಪ್ರಶ್ನೆಗೆ ಉತ್ತರಿಸದೆ ಕ್ಯಾಮೆರಾ ಆಫ್ ಮಾಡಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.