ಕೊಲಂಬೋ: ರೈತರಿಗೆ ಬೇಕಾದ ರಸಗೊಬ್ಬರ ಖರೀದಿಸಲು ಸಾಲ ನೀಡುವಂತೆ ಸಹಾಯವನ್ನು ಕೋರಿದ ಶ್ರೀಲಂಕಾ ಸರಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಭಾರತ, 429 ಕೋಟಿ ರೂ.ಗಳನ್ನು ಸಾಲವನ್ನಾಗಿ ನೀಡಲು ಒಪ್ಪಿದೆ.
ಈ ಹಣದಿಂದ 65 ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರ ಆಮದು ಮಾಡಿಕೊಳ್ಳುವುದಾಗಿ ಶ್ರೀಲಂಕಾ ನಿರ್ಧರಿಸಿದೆ.
ವಿಶ್ವಸಂಸ್ಥೆಯೂ ಶ್ರೀಲಂಕಾದ 17 ಲಕ್ಷ ನಿರ್ಗತಿಕರಿಗೆ ನೆರವಾಗುವ ಉದ್ದೇಶದಿಂದ 367 ಕೋಟಿ ರೂ.ಗಳ ನೆರವು ನೀಡುವುದಾಗಿ ತಿಳಿಸಿದೆ. ಈ ಮಧ್ಯೆ ಶ್ರೀಲಂಕಾದ ಉತ್ತರ ಭಾಗದಲ್ಲಿ ವಿದ್ಯುತ್ ಸ್ಥಾವರವನ್ನು ಭಾರತದ ಅದಾನಿ ಗ್ರೂಪ್ ಜತೆಗೆ ಕೈ ಜೋಡಿಸಿ ನಿರ್ಮಿಸುವ ಪ್ರಸ್ತಾವನೆಗೆ ಅಲ್ಲಿನ ಸಂಸತ್ತು ಒಪ್ಪಿಗೆ ನೀಡಿದೆ.
ಈ ಬಗ್ಗೆ ಮಾತನಾಡಿದ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು, ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶಕ್ಕಾಗಿ, “ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆ ಉತ್ತೇಜನ ಇಲಾಖೆ’ ಹಾಗೂ “ಮಹಿಳೆಯರು, ಮಕ್ಕಳ ಸಬಲೀಕರಣ ಇಲಾಖೆ’ ಎಂಬ ಎರಡು ಇಲಾಖೆಗಳನ್ನು ಹೊಸದಾಗಿ ಸ್ಥಾಪಿಸಿದೆ ಎಂದು ಹೇಳಿದರು.