T20 ಸರಣಿ| ಟಿಕೆಟ್ ಖರೀದಿಸಲು ನೂಕುನುಗ್ಗಲು, ಲಾಠಿ ಚಾರ್ಜ್

Prasthutha|

ದಕ್ಷಿಣ ಆಫ್ರಿಕ ವಿರುದ್ಧದ ಐದು ಪಂದ್ಯಗಳ ಟಿ- 20 ಸರಣಿಯ ಎರಡನೇ ಪಂದ್ಯ ಭಾನುವಾರ ಒಡಿಶಾದ ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಟಿಕೆಟ್‌ಗಳ ಮಾರಾಟ ಗುರುವಾರದಿಂದ ಆರಂಭವಾಗಿದೆ.

- Advertisement -

2019ರ ಬಳಿಕ ಇದೇ ಮೊದಲ ಬಾರಿಗೆ ಕಟಕ್ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಪಂದ್ಯ ನಡೆಯುವ ಮೈದಾನದ ಹೊರಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಪರಿಣಾಮ ಟಿಕೆಟ್ ಖರೀದಿಸಲು ನೂಕು ನುಗ್ಗಲು ಉಂಟಾಗಿದೆ. 12 ಸಾವಿರ ಟಿಕೆಟ್‌ಗಳನ್ನಷ್ಟೇ ಮೈದಾನದ ಹೊರಗಿನ ಕೌಂಟರ್‌ಗಳಲ್ಲಿ ಮಾರಟಕ್ಕಿಡಲಾಗಿತ್ತು. ದುಪ್ಪಟ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬಿದ್ದ ಕಾರಣ ಕಾಲ್ತುಳಿತ ಉಂಟಾಗಿದೆ. ಮಹಿಳೆಯರಿಗಾಗಿ ಎರಡು ಪ್ರತ್ಯೇಕ ಸರತಿ ಸಾಲು ಮತ್ತು ಪುರುಷರಿಗಾಗಿ ಏಳು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಮಹಿಳೆಯರ ಸರತಿ ಸಾಲು ಬಲುದೂರ ಸಾಗುತ್ತಲೇ ವಾಗ್ವಾದ ಆರಂಭವಾಗಿತ್ತು. ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಕಂಡ ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್‌ ನಡೆಸಿದ್ದಾರೆ.

ಸರತಿ ಸಾಲಿನ ಮಧ್ಯೆ ನುಸುಳಿದ ಅಭಿಮಾನಿಗಳು

- Advertisement -

ಟಿಕೆಟ್ ಖರೀದಿಸಲು ಬೆಳಗ್ಗೆ 6 ಗಂಟೆಯಿಂದಲೇ ಅಭಿಮಾನಿಗಳು ಕೌಂಟರ್ ಬಳಿ ಆಧಾರ್ ಕಾರ್ಡ್ ಹಿಡಿದು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ 9 ಗಂಟೆಗೆ ಟಿಕೆಟ್ ಮಾರಾಟ ಆರಂಭವಾದ ಬಳಿಕ ಬಂದ ಕೆಲವರು ಸರತಿ ಸಾಲಿನ ಮಧ್ಯೆ ನುಸುಳಿದ ಪರಿಣಾಮ ಗಲಾಟೆ ಪ್ರಾರಂಭವಾಗಿದೆ. “ಟಿಕೆಟ್ ಕೌಂಟರ್ ಬಳಿ ಭಾರಿ ಜನ ಜಮಾಯಿಸಿದ್ದರು ಮತ್ತು ಕೆಲವರು ಸರತಿ ಸಾಲುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂತು. ಹೀಗಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕೆಲ ಹೊತ್ತಿನ ಬಳಿಕ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದೆ,’ ಎಂದು ಸಹಾಯಕ ಪೊಲೀಸ್ ಆಯುಕ್ತ ಅಜಯ್ ದಾಸ್ ತಿಳಿಸಿದ್ದಾರೆ.

ಒಬ್ಬ ವ್ಯಕ್ತಿಗೆ ಎರಡೇ ಟಿಕೆಟ್

ಗುರುತಿನ ಪುರಾವೆಯನ್ನು ಒದಗಿಸಿದ ನಂತರ ಒಬ್ಬ ವ್ಯಕ್ತಿಗೆ ಎರಡು ಟಿಕೆಟ್‌ಗಳನ್ನು ಮಾತ್ರ ಖರೀದಿಸಲು ಅವಕಾಶ ನೀಡಲಾಗಿತ್ತು. ಮೈದಾನದ ಹೊರಗಿನ ಕೌಂಟರ್‌ಗಳಲ್ಲಿ 12 ಸಾವಿರ ಟಿಕೆಟ್, ಆನ್‌ಲೈನ್‌ನಲ್ಲಿ 5 ಸಾವಿರ ಹಾಗೂ ಶಾಲೆ, ಸಂಘ ಸಂಸ್ಥೆಗಳಿಗೆ ಎಂಟು ಸಾವಿರ ಟಿಕೆಟ್‌ಗಳನ್ನು ಮೀಸಲಿಡಲಾಗಿದೆ.



Join Whatsapp