ಪ್ರಶಾಂತ್ ಹತ್ಯೆ ಪ್ರಕರಣ; ಐವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Prasthutha|

ಹಾಸನ: ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪೂರ್ಣಚಂದ್ರ ಸಹಿತ ಐವರನ್ನು ಸಿಐಡಿ-ಪೊಲೀಸ್ ತನಿಖಾ ಅಧಿಕಾರಿಗಳ ತಂಡ ಬಂಧಿಸಿದೆ.

- Advertisement -

ಕಳೆದ ಜೂನ್ 1 ರ ಸಂಜೆ ನಡೆದಿದ್ದ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಮತ್ತು ಪೊಲೀಸರು ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳನ್ನು ಇಂದು ಬಿಗಿ ಭದ್ರತೆಯೊಂದಿಗೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ, ಕೃತ್ಯ ನಡೆದ ನಂತರ ನಾವು ಕೂಡಾ ಅನೇಕ ತಂಡಗಳನ್ನು ರಚಿಸಿ ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದೆವು. ಬಳಿಕ ಪ್ರಕರವಣನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಇನ್ನು ಮುಂದೆ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಮುಂದುವರಿಸಲಿದೆ ಎಂದು ಹೇಳಿದರು.

- Advertisement -

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜಕೀಯ ಕಾರಣಗಳಿಗಾಗಿ ನಗರಸಭೆ ಸದಸ್ಯನ ಹತ್ಯೆಯಾಗಿಲ್ಲ, ಕೇವಲ ವೈಯಕ್ತಿಕ ಕಾರಣಕ್ಕೆ ಜೀವ ತೆಗೆಯಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು. ಪ್ರಶಾಂತ್ ಹತ್ಯೆ ನಂತರ ಪೊಲೀಸ್ ಅಧಿಕಾರಿಗಳ ಮೇಲೆಯೇ ಅನುಮಾನದ ಆರೋಪ ಕೇಳಿ ಬಂದಿದ್ದವು. ನಿಷ್ಪಕ್ಷಪಾತ ತನಿಖೆ ನಡೆಯುವುದಿಲ್ಲ ಎಂಬ ಮಾತುಗಳೂ ಇದ್ದವು. ಈ ಎಲ್ಲಾ ಕಾರಣಗಳಿಂದಾಗಿ ತನಿಖೆಯನ್ನು ಸಿಐಡಿಗೆ ಕೊಡಲಾಗಿದೆ. ನಾವು ರಚನೆ ಮಾಡಿರುವ ಪೊಲೀಸ್ ತಂಡಗಳೂ ಸಿಐಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ ಎಂದು ಹೇಳಿದರು.

ಆರಂಭದಲ್ಲಿ ಸಿಕ್ಕಿ ಬಿದ್ದಿದ್ದ ಇಬ್ಬರು ಆರೋಪಿಗಳು ಕೆಲ ವಿಚಾರಗಳನ್ನು ಬಾಯ್ಬಿಟ್ಟಿದ್ದು, ವೈಯಕ್ತಿಕ ಕಾರಣದಿಂದಲೇ ಪ್ರಶಾಂತ್ ಹತ್ಯೆಯಾಗಿದ್ದು, ರಾಜಕೀಯ ಕಾರಣಗಳಿಗೆ ಅಲ್ಲ ಎಂದು ಹೇಳಿದರು.

ಪ್ರಶಾಂತ್ ಹಾಗೂ ಬಂಧಿತ ಆರೋಪಿಗಳೆಲ್ಲರೂ ಪರಿಚಯಸ್ಥರು.ಎಲ್ಲರೂ ಒಂದೇ ಭಾಗದಲ್ಲಿ ವಾಸವಾಗಿದ್ದಾರೆ. ಎಲ್ಲರೂ ರಾಜಕೀಯವಾಗಿಯೂ ಸಕ್ರಿಯವಾಗಿದ್ದರು. ಆದರೆ ಹಲವು ವಿಷಯಗಳಲ್ಲಿ ಅವರ ಮಧ್ಯೆಯೇ ಜಗಳವಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣಕ್ಕಾಗಿಯೇ ಹತ್ಯೆ ನಡೆದಂತೆ ಕಾಣುತ್ತಿದೆ ಎಂದು ವಿವರಿಸಿದರು.



Join Whatsapp