ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಭಾವಾನಾತ್ಮಕ ವಿಷಯವನ್ನು ಪ್ರಸ್ತಾಪ ಮಾಡುತ್ತಿದೆ: ಡಿ.ಕೆ.ಸುರೇಶ್ ಟೀಕೆ

Prasthutha|

►ಕಾಂಗ್ರೆಸ್ ಅಭ್ಯರ್ಥಿ  ಮಧು ಜಿ.ಮಾದೇಗೌಡ ಪರ ಡಿ ಕೆ ಸುರೇಶ್ ಮತಯಾಚನೆ

- Advertisement -

ಹಾಸನ: ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರತಿನಿತ್ಯ ಮಸೀದಿ, ದೇವಸ್ಥಾನ, ಪಠ್ಯಪುಸ್ತಕ, ಅಝಾನ್ ಮತ್ತಿತರ ಭಾವಾನಾತ್ಮಕ ವಿಷಯವನ್ನು ಪ್ರಸ್ತಾಪ ಮಾಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಅವರ ಪವಾಗಿ ನಗರದ ವಕೀಲರ ಸಂಘ, ರಾಜೀವ್ ಎಂಜಿನಿಯರಿಂಗ್ ಕಾಲೇಜು ಹಾಗೂ ಹಾಸನ ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧೆಡೆ ಮತಯಾಚನೆ ಮಾಡಿದರು.

- Advertisement -

ನಗರದ ಖಾಸಗಿ ಹೋಟೆಲೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ವೈಫಲ್ಯಗಳನ್ನು ಮರೆ ಮಾಚಲು ಪ್ರತಿನಿತ್ಯ ಮಸೀದಿ, ದೇವಸ್ಥಾನ ಪಠ್ಯಪುಸ್ತಕ, ಆಜಾನ್ ವಿಷಯ ಪ್ರಸ್ತಾಪ ಮಾಡುತ್ತಿದೆ. ಎಸ್‌ಡಿಪಿಐ, ಶ್ರೀರಾಮಸೇನೆ, ಭಜರಂಗದಳ ರಾಜ್ಯದಲ್ಲಿ ಶಾಂತಿಭಗ ತರುವ ಕೆಲಸ ಮಾಡುತ್ತಿದೆ. ನಾವು ಎಲ್ಲಾ ಸಮುದಾಯದವರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೇವೆ. ಮಸೀದಿ ಒಳಗಡೆ ದೇವಸ್ಥಾನದ ವಿಚಾರ ಬಿಜೆಪಿಯ ತಂತ್ರಗಾರಿಕೆ. ಇದರಿಂದ ನಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಪದವೀಧರ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ ಪಕ್ಷ ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ ಭಾಗದಲ್ಲಿ ಸರ್ಕಾರದ ಅನೇಕ ಸಚಿವರು ಶಾಸಕರು ತಮ್ಮ ಪ್ರಭಾವ ಬಳಸಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಜಯಭೇರಿ ಬಾರಿಸುವ ಉದ್ದೇಶದಿಂದ  ಮತದಾರರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರವು ಪಿಐಸ್‌ಐ ಹಗಣರ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದನ್ನು ಅರಿತುಕೊಂಡು ಪದವೀಧರ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.

ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳಲು, ತಮ್ಮ ಕುರ್ಚಿ ಭದ್ರಪಡಿಸಿಕೊಳಲು ಸರ್ಕಾರದ ಆಡಳಿತ ವ್ಯವಸ್ಥೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುನ ವೈಯಕ್ತಿಕ ಮಾತುಕತೆ ವಿಚಾರ ಪದವೀಧರ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರುವುದಿಲ್ಲ. ಬಹಿರಂಗವಾಗಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದು ಮತ ಕೇಳಲಾಗಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಲು ಸಿದ್ದರಾಮಯ್ಯ ಕೋರಿದ್ದಾರೆ. ಮಧು ಮಾದೇಗೌಡ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿ ಕೊಂಡು ಸುಮಾರು 30 ಶಿಕ್ಷಣ ಸಂಸ್ಥೆ ಸ್ಥಾಪಿಸಿ 20 ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಪದವೀಧರ ಮತದಾರರು ರಾಷ್ಟ್ರದ ಪರಿಸ್ಥಿತಿ ರಾಜ್ಯದ ಪರಿಸ್ಥಿತಿ ನೋಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಜೆಡಿಎಸ್ ಮನೆ ಬಾಗಿಲಿಗೆ ಅಧಿಕಾರ ಕೊಟ್ಟಿದೆ. ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯಸಭೆಯಲ್ಲಿ ದೇವೇಗೌಡರ ಗೆಲುವಿಗೆ ಬಿಜೆಪಿ ಕಾರಣ ಅಂತ ಹೇಳಿಕೆ ನೀಡಿದ್ದಾರೆ. ನೀವೇ ಅವರ ಬದ್ದತೆ ಅರ್ಥ ಮಾಡಿಕೊಳ್ಳಬಹುದು. ಜಾತ್ಯತೀತ ನಿಲುವು ಉಳಿಸಿಕೊಳ್ಳಲು ಕಾಂಗ್ರೆಸ್ ಕಳೆದ 3 ವರ್ಷಗಳಿಂದ ಜೆಡಿಎಸ್ ಪಕ್ಷ ಮಾಡಿದ ಅವಮಾನ ಸಹಿಸಿಕೊಂಡಿದೆ. ರಾಜ್ಯ ಸರ್ಕಾರದ ಬಜೆಟ್ ಮೇಲೆ ಜಿಲ್ಲೆಯ ಪ್ರಮುಖ ಇಲಾಖೆಗಳಲ್ಲಿ ಯಾವುದೇ ಆಕ್ಷನ್ ಪ್ಲಾನ್ ಆಗಿರುವುದಿಲ್ಲ. ಯಾವುದೇ ಆಕ್ಷನ್ ಪ್ಲಾನ್ ಮಾಡದೆ ಬಿಜೆಪಿಯವರು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ  ಆಯ್ಕೆ ವಿಚಾರದಲ್ಲಿ ಪಕ್ಷ ಸಂಘಟನೆ, ಅವರ ಚಲನ ವಲನ, ಜನಪರ ಕೆಲಸ ಮಾಡುವವರನ್ನು ನೋಡಿ ವಿಧಾನಸಭಾ ಕ್ಷೇತ್ರದ ಅಭ್ಯ ರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮುಂದಿನ ಚುನಾವಣೆಯಲ್ಲಿ ಹಾಸನ ಜಿಲ್ಲೆಯ 7 ಸ್ಥಾನವನ್ನು ಜಯಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮುಖಂಡರಾದ ಹೆಚ್.ಕೆ. ಮಹೇಶ್, ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ, ಮುನಿಸ್ವಾಮಿ, ರಂಗಸ್ವಾಮಿ, ಲಕ್ಷ್ಮ ಣ್, ತಾರಾಚಂದನ್, ಶಂಕರ್, ವಿನೋದ್ ಇತರರು ಉಪಸ್ಥಿತರಿದ್ದರು.



Join Whatsapp