ಟಿ-20 ಸರಣಿ: ರಿಷಭ್ ಪಂತ್ ಪಾಳಯಕ್ಕೆ ಹರಿಣಗಳ ಸವಾಲು

Prasthutha|

ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಮಹತ್ವದ ಟಿ-20 ಸರಣಿಯ ಮೊದಲ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ಅಭ್ಯಾಸದ ವೇಳೆ ಕೆ.ಎಲ್. ರಾಹುಲ್ ಗಾಯಗೊಂಡು ಸರಣಿಯಿಂದ ಹೊರನಡೆದಿದ್ದು, ರಿಷಭ್ ಪಂತ್ ನೇತೃತ್ವದ ಯುವ ಟೀಮ್ ಇಂಡಿಯಾ ಹೊಸ ಸವಾಲಿಗೆ ಸಜ್ಜಾಗಿದೆ.

- Advertisement -


ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಹೊಸ ದಾಖಲೆಯ ಮೇಲೆ ಕಣ್ಣಿಟ್ಟು ಟೀಮ್ ಇಂಡಿಯಾ ಮೈದಾನಕ್ಕಿಳಿಯಲಿದೆ. ಟಿ-20 ಮಾದರಿಯಲ್ಲಿ ಸತತ 12 ಪಂದ್ಯಗಳನ್ನು ಗೆದ್ದಿರುವ ಭಾರತ, ಗುರುವಾರದ ಪಂದ್ಯದಲ್ಲಿ ಗೆದ್ದರೆ ಅಫ್ಘಾನಿಸ್ತಾನವನ್ನು ಹಿಂದಿಕ್ಕಿ ವಿಶ್ವದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾಗೆ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. .ಎಲ್.ರಾಹುಲ್ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಅಭ್ಯಾಸದ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರನಡೆದಿದ್ದಾರೆ. ಹೀಗಾಗಿ ರಿಷಭ್ ಪಂತ್ ಸಾರಥ್ಯದ ಯುವ ಆಟಗಾರರಿಗೆ ಹೊಸ ಸವಾಲು ಎದುರಾಗಿದೆ.


ಐಪಿಎಲ್ನಲ್ಲಿ ಮೊದಲ ನಾಯಕತ್ವದ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾದ ಉಪನಾಯಕನಾಗಿದ್ದಾರೆ. ಮತ್ತೊಂದೆಡೆ ಆರ್ಸಿಬಿಯಲ್ಲಿ ಫಿನಿಶರ್ ಆಗಿ ಮಿಂಚಿದ್ದ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮೈದನಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಉಮ್ರಾನ್ ಮಲಿಕ್ ಪಾದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್, ರವಿ ಬಿಷ್ಣೋಯ್ ಹಾಗೂ ಅಕ್ಷರ್ ಪಟೇಲ್ ನಡುವೆ ದ್ರಾವಿಡ್ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ತೆಂಬಾ ಬವುಮಾ ನಾಯಕತ್ವದ ಆಫ್ರಿಕಾ ತಂಡದಲ್ಲಿರುವ ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ಆಡಂ ಮಾರ್ಕಮ್, ಕಗಿಸೊ ರಬಾಡಾ ಇತ್ತೀಚೆಗಷ್ಟೇ ಐಪಿಎಲ್ ಆಡಿದ್ದು, ಇದು ಹರಿಣಗಳಿಗೆ ನೆರವಾಗಲಿದೆ.

- Advertisement -


ಉಭಯ ತಂಡಗಳು ಇದುವರೆಗೂ ಒಟ್ಟು 15 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಟೀಮ್ ಇಂಡಿಯಾ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ 6 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಆದರೆ ಭಾರತದಲ್ಲಿ ಆಡಿದ 4 ಪಂದ್ಯಗಳಲ್ಲಿ ಹರಿಣಗಳ ಕೈ ಮೇಲಾಗಿದೆ. ಮೂರು ಪಂದ್ಯಗಳಲ್ಲಿ ಆಫ್ರಿಕಾ ಗೆಲುವು ಸಾಧಿಸಿದ್ದು, ಭಾರತ ತಾಯ್ನೆಲದಲ್ಲಿ ಒಂದೇ ಪಂದ್ಯವನ್ನಷ್ಟೇ ಗೆಲ್ಲುವಲ್ಲಿ ಸಫಲವಾಗಿದೆ.


2019ರ ಸೆಪ್ಟೆಂಬರ್ ನಲ್ಲಿ ಕೊನೆಯದಾಗಿ ಎರಡು ತಂಡಗಳು ಮೂರು ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಅಂತರದಲ್ಲಿ ಜಯಶಾಲಿಯಾಗಿತ್ತು. ಆದರೆ ನಿರ್ಣಾಯಕ ಮೂರನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ ಆಫ್ರಿಕಾ, ಭಾರತ ನೀಡಿದ್ದ 134 ರನ್ಗಳ ಸವಾಲನು ಕೇವಲ 1 ವಿಕೆಟ್ ನಷ್ಟದಲ್ಲಿ ಚೇಸ್ ಮಾಡಿತ್ತು. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾ ಆರು ಟಿ-20 ಸರಣಿಯಲಿ 25 ಪಂದ್ಯಗಳನ್ನಾಡಲಿದೆ.


ಸಂಭಾವ್ಯ ತಂಡ:
ಭಾರತ ತಂಡ : ರಿಷಭ್ ಪಂತ್ (ನಾಯಕ) (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, , ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ಉಪನಾಯಕ ), ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್ , ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ದ.ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಂಬ್ಡರ್, ಟ್ರೈಸ್ಸೆ ಸ್ಟಬ್ಡರ್, ರಸ್ಸಿ ವಾನ್ಡರ್ ಡಸೆನ್ , ಮಾರ್ಕೊ ಜಾನ್ಸೆನ್.



Join Whatsapp