ಬೆಂಗಳೂರು: ಸರ್ಕಾರ ಪರಿಷ್ಕೃತ ಪಠ್ಯವನ್ನು ವಾಪಸು ಪಡೆಯಬೇಕು ಹಾಗೂ ಬರಗೂರು ರಾಮಚಂದ್ರಪ್ಪನವರು ಪರಿಷ್ಕರಣೆ ಮಾಡಿದ್ದ ಪಠ್ಯವನ್ನೇ ಮುಂದುವರೆಸಬೇಕು. ಇದನ್ನು ಸರ್ಕಾರ ಈಡೇರಿಸದೆ ಹೋದರೆ ಮುಂದಿನ ಹೋರಾಟದ ರೂಪುರೇಷಗಳನ್ನು ಚರ್ಚಿಸಿ, ತೀರ್ಮಾನ ಮಾಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆಪಿಸಿಸಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷ ಎರಡೂ ಜಂಟಿಯಾಗಿ ರೋಹಿತ್ ಚಕ್ರತೀರ್ಥ ಅವರು ಪರಿಷ್ಕರಣೆ ಮಾಡಿರುವ ಪಠ್ಯಕ್ರಮವನ್ನು ವಿರೋಧಿಸಿ ಸಾಂಕೇತಿಕವಾಗಿ ಇಂದು ಮುಷ್ಕರ ನಡೆಸುತ್ತಿದ್ದೇವೆ. ಒಂದು ಗಂಟೆ ಕಾಲ ಮಹಾತ್ಮ ಗಾಂಧಿ ಅವರ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದೇವೆ. ಸರ್ಕಾರ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜನೆ ಮಾಡಿದೆ. ಸಾರ್ವಜನಿಕರು, ಸಾಹಿತಿಗಳು, ಮಠಾಧೀಶರು, ಶಿಕ್ಷಣ ತಜ್ಞರು, ರಾಜಕಾರಣಿಗಳಿಂದ ತೀವ್ರವಾದ ವಿರೋಧ ವ್ಯಕ್ತವಾದದ್ದು ಇದಕ್ಕೆ ಕಾರಣ. ಈಗ ಸಮಿತಿ ವಿಸರ್ಜನೆ ಮಾಡಿದ ಮೇಲೆ ಆ ಸಮಿತಿ ಶಿಫಾರಸು ಮಾಡಿದ ಪಠ್ಯವನ್ನು ಇಟ್ಟುಕೊಂಡಿದೆ. ಸಮಿತಿ ವಜಾ ಆಗಿರುವುದರಿಂದ ಆ ಸಮಿತಿ ಪರಿಷ್ಕರಣೆ ಮಾಡಿದ ಪಠ್ಯವನ್ನು ಮಕ್ಕಳಿಗೆ ಬೋಧನೆ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಅವರು ಆಗ್ರಹಿಸಿದರು.
ಪರಿಷ್ಕರಣೆಗೊಂಡ ಪಠ್ಯದಲ್ಲಿ ಇತಿಹಾಸ ತಿರುಚುವ ಕೆಲಸ ಆಗಿದೆ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು, ಕುವೆಂಪು, ಭಗತ್ ಸಿಂಗ್, ಇನ್ನೂ ಅನೇಕ ಸಂತರು, ದಾರ್ಶನಿಕರ ಚರಿತ್ರೆಗಳನ್ನು ತಿರುಚಲಾಗಿದೆ. ಉದಾಹರಣೆಗೆ 9ನೇ ತರಗತಿ ಪಠ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿತ್ತು, ಈಗ ಅದನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ಇದನ್ನು ತೆಗೆದುಹಾಕಲಾಗಿದೆ. ಹೀಗೆ ದೇಶಭಕ್ತರು, ದಾರ್ಶನಿಕರ ವಿಚಾರಗಳನ್ನು ತಿರುಚಿ ಕೇಸರಿಕರಣಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಶಿಕ್ಷಣ ಸಚಿವ ನಾಗೇಶ್ ಅವರು ಮೊದಲು ಪರಿಷ್ಕರಣೆಗೊಂಡ ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಗಣ್ಯ ವ್ಯಕ್ತಿಗಳಿಂದ ಇದಕ್ಕೆ ಪ್ರತಿರೋಧ ವ್ಯಕ್ತವಾದ ಮೇಲೆ ಕೆಲವು ವಿಚಾರಗಳನ್ನು ಪುನರ್ ಪರಿಶೀಲನೆ ಮಾಡುತ್ತೇವೆ, ಇನ್ನೊಂದು ತಿಂಗಳಲ್ಲಿ ಪಠ್ಯಪುಸ್ತಕ ಮುದ್ರಣ ಮಾಡಿ ಮಕ್ಕಳಿಗೆ ಹಂಚುತ್ತೇವೆ ಎಂದಿದ್ದಾರೆ. ಇದರರ್ಥ ತಾವು ಚರಿತ್ರೆ ತಿರುಚಿರುವುದು ಸತ್ಯ, ಆರ್.ಎಸ್.ಎಸ್ ನಿರ್ದೇಶನದಂತೆ ಪಠ್ಯ ರಚನೆ ಮಾಡಿದ್ದಾರೆ ಎಂದು ಒಪ್ಪಿಕೊಂಡಂತೆ.
ನಾವು ಒಂದು ರಾಷ್ಟ್ರೀಯ ಪಕ್ಷವಾಗಿ ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ, ನೈಜ ಇತಿಹಾಸವನ್ನು ತಿಳಿಸುವ ಕೆಲಸ ಮಾಡಬೇಕು, ಕೇಸರಿಕರಣಗೊಂಡಿರುವ ಪಠ್ಯವನ್ನು ಮಕ್ಕಳಿಗೆ ತಿಳಿಸಬಾರದು ಎಂದು ಒತ್ತಾಯ ಮಾಡುತ್ತೇವೆ. ಆರ್. ಎಸ್. ಎಸ್ ನಲ್ಲಿ ಮಾಡುವ ಭಾಷಣವನ್ನು ಮಕ್ಕಳಿಗೆ ತಿಳಿಸಿ, ಅವರ ಮನಸನ್ನು ಹಾಳು ಮಾಡುವ ಕೆಲಸ ಮಾಡಬಾರದು ಎಂಬುದು ನಮ್ಮ ನಿಲುವು ಎಂದು ಅವರು ಹೇಳಿದರು.
ನಾವು ಮಾಡುವ ಯಾವುದೇ ಹೋರಾಟವನ್ನು ಬದ್ಧತೆಯಿಂದ ಮಾಡುತ್ತೇವೆ, ತೋರಿಕೆಗಾಗಿ ಮಾಡಲ್ಲ. ನಾವು ಆರ್. ಎಸ್. ಎಸ್ ಮತ್ತು ಕೇಸರಿಕರಣದ ವಿರುದ್ಧ ಇದ್ದೇವೆ, ಅದನ್ನು ಪ್ರಾಮಾಣಿಕವಾಗಿ ವಿರೋಧಿಸುತ್ತೇವೆ. ಬಿಜೆಪಿ ಅವರು ಮಕ್ಕಳ ಮನಸನ್ನು ಹಾಳು ಮಾಡುವ, ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಎಂದು ಅವರು ಸ್ಪಷ್ಟಪಡಿಸಿದರು.
ಕೋಮುವಾದಿ ಪಕ್ಷ ಗೆಲ್ಲಬಾರದು ಎಂಬುದು ಜೆಡಿಎಸ್ ನ ಉದ್ದೇಶವಾಗಿದ್ದರೆ, ಒಂದು ದಿನ ಮುಂಚಿತವಾಗಿ ನಾಮಪತ್ರ ಸಲ್ಲಿಸಿದ್ದು ನಾವು, 24 ಗಂಟೆಗಳ ನಂತರ ಜೆಡಿಎಸ್ ನವರು ನಾಮಪತ್ರ ಹಾಕಿದ್ದಾರೆ. ಈ ರೀತಿ ನಾಮಪತ್ರ ಹಾಕಬಾರದಿತ್ತು ಅಲ್ವಾ? ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧೆ ಮಾಡಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ. 37 ಜನ ಶಾಸಕರನ್ನು ಹೊಂದಿದ್ದ ಕುಮಾರ ಸ್ವಾಮಿಗೆ ಬೆಂಬಲ ನೀಡಿದ್ದು ನಾವು. ದೇವೇಗೌಡರಿಗೆ ನಾವು ಬೆಂಬಲಿಸಿದ್ದರಿಂದ ಪ್ರಧಾನಿಯಾದರು ಅಲ್ವಾ? ಹಾಗಾಗಿ ಈಗ ಜೆಡಿಎಸ್ ನವರು ನಮಗೆ ಸಹಾಯ ಮಾಡಬೇಕೋ ಬೇಡ್ವೋ? ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದೇವೆ, ಆತ ಸಜ್ಜನ, ಪ್ರಗತಿಪರ ಚಿಂತನೆ ಇರುವ, ಜಾತ್ಯತೀತತೆಯಲ್ಲಿ ಬದ್ಧತೆ ಇರುವ ವ್ಯಕ್ತಿ. ಜೆಡಿಎಸ್ ಗೆ ನಿಜವಾಗಿ ಬಿಜೆಪಿ ಬರಬಾರದು ಎಂದು ಇದ್ದರೆ ನಮ್ಮ ಅಭ್ಯರ್ಥಿಗೆ ಬೆಂಬಲಿಸಲಿ ಎಂದು ನಾನು ಮನವಿ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ಹೈಕಮಾಂಡ್ ನವರೇ ನಮಗೆ ಎರಡನೇ ಅಭ್ಯರ್ಥಿ ಹಾಕಿ ಎಂದು ಹೇಳಿದ್ದು, ಜೆಡಿಎಸ್ ನವರು ತಮ್ಮ ಅಭ್ಯರ್ಥಿಯನ್ನು ನಿವೃತ್ತಗೊಳಿಸಿ ನಮ್ಮನ್ನು ಬೆಂಬಲಿಸಲಿ. ಇಲ್ಲಿ ಎರಡನೇ, ಮೂರನೇ ಪ್ರಾಶಸ್ತ್ಯದ ಮತಗಳ ವಿಚಾರ ಬರುವುದೇ ಇಲ್ಲ. ಜೆಡಿಎಸ್ ನವರು ನಮ್ಮ ಜೊತೆ ಅಧಿಕೃತ ಮಾತುಕತೆ ನಡೆಸಿದ್ದಾರಾ? ನಾವು ಮೊದಲು ಅಭ್ಯರ್ಥಿ ಇಳಿಸಿದ್ದು, ಯಾರ ಪರ ನ್ಯಾಯ ಇದೆ? ಜೆಡಿಎಸ್ ಗಿಂತ ಒಂದು ದಿನ ಮುಂಚಿತವಾಗಿ ನಾವು ನಾಮಪತ್ರ ಹಾಕಿದ್ದು. ದೇವೇಗೌಡರು ರಾಜ್ಯಸಭೆಗೆ ನಾಮಪತ್ರ ಹಾಕಿದ್ದಾಗ, ಅವರು ಮಾಜಿ ಪ್ರಧಾನಿಗಳು, ರಾಜ್ಯಸಭೆಗೆ ಹೋಗಬೇಕು ಎಂದು ನಾವು ನಾಮಪತ್ರ ಹಾಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಅವರಂತೆ ಜೆಡಿಎಸ್ ಗೆ ಸಮಯ ನಿಗದಿ ಮಾಡಲ್ಲ. ಅವರಿಗೆ ಜಾತ್ಯಾತೀತ ತತ್ವದಲ್ಲಿ ನಿಜವಾಗಿ ನಂಬಿಕೆ ಇದ್ದರೆ, ಜಾತ್ಯಾತೀತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದಿದ್ದರೆ ನಮಗೆ ಬೆಂಬಲ ಕೊಡಲಿ. ಹಲವು ಶಾಸಕರು ಜೆಡಿಎಸ್ ಅನ್ನು ಕೈಬಿಡುತ್ತಿದ್ದಾರೆ. 45 ಮತಗಳು ಅಲ್ಲದೆ ನಮ್ಮ ಬಳಿ 26 ಹೆಚ್ಚುವರಿ ಮತಗಳು ಇವೆ. ಜೈರಾಮ್ ರಮೇಶ್ ಗೆ ಹಾಕುವ ಎಲ್ಲ ಮತಗಳು ಮನ್ಸೂರ್ ಅಲಿ ಖಾನ್ ಗೆ ಎರಡನೇ ಪ್ರಾಶಸ್ತ್ಯದ ಮತಗಳಾಗಿ ಹಾಕುತ್ತೇವೆ, ಇವುಗಳ ಜೊತೆಗೆ ನಮಗೆ ಆತ್ಮಸಾಕ್ಷಿ ಮತಗಳು ಸಿಗುತ್ತವೆ. ಜೆಡಿಎಸ್ ಮತ್ತು ಬಿಜೆಪಿ ಎರಡೂ ಕಡೆಯ ಈ ಮತಗಳು ನಮಗೆ ಬೀಳುತ್ತದೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್ ಬಳಿ ನಾವು ಹೋಗಿದ್ದು ನಿಜ. ನಮ್ಮಲ್ಲಿ 80 ಜನ ಶಾಸಕರಿದ್ದರು. 37 ಜನ ಶಾಸಕರಿದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿಲ್ವ? ಜೆಡಿಎಸ್ ನವರು ಕೊನೆ ಘಳಿಗೆಯಲ್ಲಿ ತಮ್ಮ ಅಭ್ಯರ್ಥಿಯನ್ನು ನಿವೃತ್ತಗೊಳಿಸಿ ನಮಗೆ ಬೆಂಬಲಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದು ಸಿದ್ದರಾಮಯ್ಯ ಹೇಳಿದರು.