ಚಿಕ್ಕಮಗಳೂರು : ಆನೆ ದಂತ ಮಾರಾಟ ಯತ್ನ; ಮಾಲು ಸಹಿತ ಆರೋಪಿಗಳ ಬಂಧನ

Prasthutha|

ಚಿಕ್ಕಮಗಳೂರು:  ಎರಡು ಬೃಹತ್ ಆನೆ ದಂತಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಮಧ್ಯವರ್ತಿಗಳು ಸಹಿತ ಐವರು ಆರೋಪಿಗಳನ್ನು ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮಾಲು ಸಮೇತ ಅಲ್ಲಂಪುರ ಪೆಟ್ರೊಲ್ ಬಂಕ್ ಬಳಿ ಬಂಧಿಸಿದ್ದಾರೆ.

- Advertisement -

ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಮೂಲದ ಶಿವಕುಮಾರ್, ಸುಂದ್ರೇಶ್, ಮಹಾಂತೇಶ್, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೂಲದ ನೂರ್ ಅಹಮದ್, ಚಿತ್ರದುರ್ಗ ತಾಲೂಕಿನ ಅಂಜಿನಪ್ಪ ಎಂದು ಗುರುತಿಸಲಾಗಿದೆ.

ಶಿವಕುಮಾರ್ ಹಾಗೂ ಸುಂದ್ರೇಶ್ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶ  ದಟ್ಟಾರಣ್ಯವಾಗಿದ್ದು, ಅನುಮತಿ ಇಲ್ಲದೆ ಯಾರೂ ಒಳಗೆ ಹೋಗುವಂತಿಲ್ಲ. ಆದರೂ, ಕಾಫಿ ಎಸ್ಟೇಟ್‍ನಲ್ಲಿ ಕೆಲಸಗಾರರಾಗಿದ್ದ ಈ ಇಬ್ಬರು ಅರಣ್ಯದ ಹಳ್ಳದಲ್ಲಿ ಅಕ್ರಮವಾಗಿ ಮೀನು ಹಿಡಿಯಲು ಹೋಗುತ್ತಿದ್ದರು. ಈ ವೇಳೆ, ಕಾಡಿನಲ್ಲಿ ಆನೆ ಸಾವನ್ನಪ್ಪಿರುವುದನ್ನುಕಂಡು ಅದರ ಎರಡು ಬೃಹತ್ ದಂತಗಳನ್ನ ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ಆರು ತಿಂಗಳಿನಿಂದ  ಆನೆ ದಂತ  ಆರೋಪಿಗಳ ಬಳಿಯೇ ಇತ್ತು ಎಂಬುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

ಈ ಕಾರ್ಯಚರಣೆಗೆ ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್ ಮಾರ್ಗದರ್ಶನಲ್ಲಿ ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ ಇನ್ಸ್‍ಪೆಕ್ಟರ್ ಶರತ್, ಸಿಬ್ಬಂದಿಗಳಾದ ಹೆಚ್.ದೇವರಾಜ್, ಡಿ.ಎಚ್.ದಿನೇಶ್, ಎಸ್.ಕೆ.ದಿವಾಕರ್, ಕೆ.ಎಸ್.ದಿಲೀಪ್, ಹಾಲೇಶ್, ಹೇಮಾವತಿ, ತಿಮ್ಮಶೆಟ್ಟಿಯವರು ಪಾಲ್ಗೊಂಡಿದ್ದರು. ಬಂಧಿತರಿಂದ ಎರಡು ಆನೆ ದಂತ ಹಾಗೂ ಒಂದು ಓಮ್ನಿಯನ್ನು ವಶಪಡಿಸಿಕೊಳ್ಳಲಾಗಿದೆ.



Join Whatsapp