ಹೊಸದಿಲ್ಲಿ: ನೈರುತ್ಯ ದಿಲ್ಲಿಯ ಜಹಾಂಗೀರ್ ಪುರಿಯಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿರುವುದು ಸಿಸಿಟೀವಿ ದೃಶ್ಯಗಳಲ್ಲಿ ಕಂಡುಬಂದಿದ್ದು, ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದು ಕೋಮು ಗಲಭೆಯಲ್ಲ, ಎರಡು ತಂಡಗಳ ಸಿಟ್ಟಿನ ಪ್ರದರ್ಶನ ಮಾತ್ರ ಎಂದು ಪೊಲೀಸರು ಹೇಳಿದ್ದಾರೆ. ಇದೇ ಏಪ್ರಿಲ್ ನಲ್ಲಿ ಜಹಾಂಗೀರ್ ಪುರಿಯಲ್ಲಿ ರಾಮ ನವಮಿ ಮತ್ತು ಹನುಮ ಜಯಂತಿ ಹೆಸರಿನಲ್ಲಿ ಗಲಭೆ ನಡೆದಿತ್ತು. ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಹಲವರು ಇನ್ನೂ ಸೆರೆಮನೆಗಳಲ್ಲಿ ಇದ್ದಾರೆ.
ಮಂಗಳವಾರ ರಾತ್ರಿ 10.45ರ ಸುಮಾರಿಗೆ ಜನರು ಇಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರವಾಣಿ ಕರೆ ಹೋಗಿದೆ. ಆದರೆ ಸಿಸಿಟೀವಿ ದೃಶ್ಯ ಪರಿಶೀಲಿಸಿದಾಗ ಇದು ಎರಡು ಗುಂಪುಗಳ ಕಲ್ಲೆಸೆತ ಆಗಿರದೆ ಒಂದು ಗುಂಪು ಕೆಲವು ಮನೆಗಳ ಮೇಲೆ ಕಲ್ಲೆಸೆದು ಓಡಿ ಹೋಗಿರುವುದು ಗೊತ್ತಾಗಿದೆ.
ಮೂರು ವಾಹನಗಳಿಗೆ ಕಲ್ಲೆಸೆತದಿಂದ ಹಾನಿಯಾಗಿರುವುದು ತಿಳಿದು ಬಂದಿದೆ. ಉಳಿದಂತೆ ಯಾರಿಗೂ ಗಾಯ ಆಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
“ಎರಡು ಪಿಸಿಆರ್ ಕರೆಗಳನ್ನು ಸ್ವೀಕರಿಸಲಾಗಿದೆ. ಕೆಲವರು ಕಲ್ಲು ಎಸೆದಿರುವುದು ಗೊತ್ತಾಗಿದೆ. ಜಹೀರ್ ಎಂಬ ವ್ಯಕ್ತಿ ಕುಡಿದು ಕಲ್ಲೆಸೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸ್ಥಳೀಯರಾದ ಸುಹೈಬ್ ಮತ್ತು ಸಮೀರ್ ಎಂಬ ಇಬ್ಬರ ಹುಡುಕಾಟದಲ್ಲಿ ನಾವಿದ್ದೇವೆ” ಎಂದು ನೈರುತ್ಯ ದಿಲ್ಲಿ ಉಪ ಕಮಿಶನರ್ ಉಷಾ ರಂಗ್ನಾನಿ ಹೇಳಿದ್ದಾರೆ.
“ಇಲ್ಲಿ ಯಾವುದೇ ಕೋಮು ಸಂಘರ್ಷ ನಡೆದಿಲ್ಲ. ಎರಡು ಗುಂಪುಗಳವರೂ ಒಂದೇ ಕೋಮಿಗೆ ಸೇರಿದವರಾಗಿದ್ದಾರೆ” ಎಂದೂ ರಂಗ್ನಾನಿ ಹೇಳಿದರು.
ಈ ಎರಡು ಗುಂಪುಗಳು ಇತ್ತೀಚಿನ ಕೆಲವು ದಿನಗಳಿಂದ ಜಗಳದಲ್ಲಿ ತೊಡಗಿವೆ ಎಂದೂ ಪೋಲೀಸರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಶಾಲ್ ಮತ್ತು ವೀರು ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇತರ ಸಂಶಯಿತರ ಹುಡುಕಾಟದಲ್ಲಿ ಇರುವುದಾಗಿ ಎಂದು ಗೊಂದಲಕಾರಿ ಹೇಳಿಕೆಯನ್ನು ಸಹ ನೀಡಿದ್ದಾರೆ. ಇನ್ನೂ ಹೆಚ್ಚು ಸಂಘರ್ಷ ನಡೆಯದಂತೆ ಪೊಲೀಸರು ಆ ಪ್ರದೇಶದಲ್ಲಿ ಭದ್ರತೆ ಗಸ್ತು ಹೆಚ್ಚು ಮಾಡಿದ್ದಾರೆ.