ಕಾನ್ವೆಂಟ್ ದಲಿತ ಹೇಳಿಕೆ: ಸಚಿವ ಸುನೀಲ್ ಕುಮಾರ್ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕಾಪ್ರಹಾರ

Prasthutha|

ಬೆಂಗಳೂರು: ನಿನ್ನೆ ಸಚಿವ ಸುನಿಲ್ ಕುಮಾರ್ ಅವರು ನನ್ನನ್ನು ಕಾನ್ವೆಂಟ್ ದಲಿತ ಎಂದು ವೈಯಕ್ತಿಕ ಟೀಕೆ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ಸಚಿವರಿಗೆ ಬಿಜೆಪಿ ಐಟಿ ಸೆಲ್ ನವರು ಹೇಳಿಕೊಡುತ್ತಾರೋ ಅಥವಾ ಅವರ ಪ್ರಬುದ್ಧತೆಯೇ ಈ ಮಟ್ಟಕ್ಕಿದೆಯೋ ಗೊತ್ತಿಲ್ಲ. ದಲಿತರು ಬೆಂಗಳೂರಿನಲ್ಲಿ ಹುಟ್ಟಬಾರದೆ? ಹಾಗಂತ ನಿಯಮಗಳಿವೆಯೇ? ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ಹುಟ್ಟುವ ದಲಿತರು ಬೇರೆನಾ? ಅವರು ನನ್ನನ್ನು ಕಾನ್ವೆಂಟ್ ದಲಿತ ಎಂದು ಹೇಳಿದ್ದು, ಅವರು ನನ್ನ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡು ಮಾತನಾಡಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಓದಿದ್ದು ಕಾನ್ವೆಂಟ್ ನಲ್ಲಿ ಅಲ್ಲ. ಕಾರ್ಕಳದ ಸಮೀಪದಲ್ಲಿರುವ ಮಠದಲ್ಲಿ. ಆ ಮಠ ನಡೆಸುವ ಪೂರ್ಣಪ್ರಜ್ಞ ಶಾಲೆಯಲ್ಲಿ. ಸರಿ ನಾನು ಕಾನ್ವೆಂಟ್ ನಲ್ಲಿ ಓದಿದ್ದೇನೆ ಎಂದುಕೊಳ್ಳಿ. ಅದರಲ್ಲಿ ತಪ್ಪೇನಿದೆ. ನಮ್ಮಂತಹವರು ಕಲ್ಬುರ್ಗಿಯಿಂದ ಬೆಂಗಳೂರಿಗೆ ಬಂದು ಕಲಿಯಬಾರದೇ? ದಲಿತರು ಇಂಗ್ಲೀಷ್ ಕಲಿಯಬಾರದೆ? ಬಿಜೆಪಿಯವರಿಗೆ ಅವರ ಮಲ ಹೊರುವ, ಕಾಲು ಒತ್ತುವ, ಚರಂಡಿ ಸ್ವಚ್ಛ ಮಾಡುವ ದಲಿತರೆಂದರೆ ಪ್ರೀತಿಯೇ? ಎಂದು ಪ್ರಶ್ನಿಸಿದರು.


ನಾನು ಬಸವಣ್ಣ, ಅಂಬೇಡ್ಕರ್, ಗುರುನಾರಾಯಣ ಅವರ ತತ್ವ, ಸಂವಿಧಾನದ ಸಂದೇಶವನ್ನು ಅನುಸರಿಸುವ ದಲಿತ. ಇಂಗ್ಲೀಷ್ ಮಾತನಾಡುವ ದಲಿತ ಎಂದರೆ ನಿಮಗೆ ಸಮಸ್ಯೆಯೇ? ಈ ಸಮಸ್ಯೆ ನಿಮಗೆ ಮಾತ್ರವೇ ಅಥವಾ ಇಡೀ ನಿಮ್ಮ ಪಕ್ಷಕ್ಕೆ ಸಮಸ್ಯೆಯೇ? ದಲಿತರು ಶಿಕ್ಷಣದಿಂದ ದೂರವಿದ್ದು, ನಿಮ್ಮ ಚತುರ್ವರ್ಣದಲ್ಲಿ ಹೇಳಿರುವಂತೆ ಇರಬೇಕೇ? ಪ್ರತಾಪ್ ಸಿಂಹ, ಸುನೀಲ್ ಕುಮಾರ್ ಅವರು ಹೀಗೆ ಮಾತನಾಡುತ್ತಾರೆ. ಪ್ರಿಯಾಂಕ್ ಸಾಮರ್ಥ್ಯ ಮೀರಿ ಮಾತನಾಡುತ್ತಾರೆ ಎಂದು ಹೇಳುತ್ತೀರಲ್ಲ, ನಾನು ನಿಮಗೆ ಸವಾಲು ಹಾಕುತ್ತೇನೆ. ಚಿಕಾಗೋಯಿಂದ ಚಿತ್ತಾಪುರ ವರೆಗೂ ನೀವು ಯಾವುದೇ ವೇದಿಕೆ ಸಜ್ಜು ಮಾಡಿ, ನೀವು ವಿಷಯ ಆಯ್ಕೆ ಮಾಡಿ ನಾನು ಆ ಬಗ್ಗೆ ಮಾತನಾಡುತ್ತೇನೆ. ಈ ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಇಬ್ಬರ ಸಾಮರ್ಥ್ಯವೇ ಪರಿಕ್ಷೆಯಾಗಲಿ ಎಂದು ಸಚಿವರಿಗೆ ಸವಾಲು ಹಾಕಿದರು.

- Advertisement -


ನಿಮ್ಮ 2 ರೂ. ಟ್ರೊಲ್ ಗಳು ಬಾಡಿಗೆ ಭಾಷಣಕಾರರು, ನಿನ್ನೆ ಮೊನ್ನೆ ಸಂಸದರಾದವರು ನೆಹರು, ಮನಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ನಾನು ನಿಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡಬಾರದೇ? ಸುನಿಲ್ ಕುಮಾರ್ ಅವರೇ, ನಾನು ಮಾಜಿ ಸಚಿವ, ವಿರೋಧ ಪಕ್ಷದ ಶಾಸಕ ಹಾಗೂ ವಕ್ತಾರ. ಸರ್ಕಾರ ಪ್ರಶ್ನಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ಸಿಎಂ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದೇವಾ? ಬಿಟ್ ಕಾಯಿನ್, ಎಸ್ ಸಿ ಬೋರ್ವೆಲ್ ಹಗರಣದ ಬಗ್ಗೆ, ಯುವಕರ ನಿರುದ್ಯೋಗ, ನೇಮಕಾತಿ ಅಕ್ರಮದ ಬಗ್ಗೆ, ಕೇಕೆಆರ್ ಡಿಬಿಯಲ್ಲಿ ಆಗಿರುವ ಅಕ್ರಮದ ಬಗ್ಗೆ, ಕೇಸರಿ ಶಾಲು ಬಗ್ಗೆ ಮಾತನಾಡುವುದು ತಪ್ಪಾ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ನಾವು ಕೇಳುವ ಸರಳ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇಲ್ಲ ಎಂದರೆ ನೀವು ವೈಯಕ್ತಿಕ ಟೀಕೆ ಮಾಡುತ್ತೀರಾ? ನೀವು ಎಷ್ಟೇ ವೈಯಕ್ತಿಕ ಟೀಕೆ ಮಾಡಿದರೂ ನಾನು ಪ್ರಶ್ನೆ ಮಾಡುವುದು ನಿಲ್ಲಿಸುವುದಿಲ್ಲ. ನೀವು ರಾಜ್ಯದ ಜನರಿಗೆ ಉತ್ತರ ನೀಡಬೇಕು.
ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ ಸತ್ಯಾಗ್ರಹ, ದುಂಡು ಮೇಜಿನ ಸಭೆ, ಅಂಬೇಡ್ಕರ್ ಅವರು ಸಂವಿಧಾನ ಲೋಕಾರ್ಪಣೆ ಮಾಡುವಾಗ ಆರ್ ಎಸ್ಎಸ್ ಎಲ್ಲಿತ್ತು? ಸಂವಿಧಾನ ಸುಟ್ಟು ಮನುಸ್ಮೃತಿ ಸಂವಿಧಾನ ಆಗಬೇಕು ಎಂದು ಹೇಳಿದ್ದು ಯಾಕೆ? ರಾಷ್ಟ್ರಧ್ವಜ ಹಾರಿಸಲು 57 ವರ್ಷ ಸಮಯ ತೆಗೆದುಕೊಂಡಿದ್ದು ಯಾಕೆ? ಸುಭಾಷ್ ಚಂದ್ರ ಬೋಸ್ ಇಂಡಿಯನ್ ಆರ್ಮಿ ಕಟ್ಟುವಾಗ ನಿಮ್ಮ ನಿಲುವು ಏನಿತ್ತು? ಹೆಡೆಗೆವಾರ್ ಅವರು ರಾಷ್ಟ್ರಧ್ವಜದ ಬಗ್ಗೆ ಏನು ಹೇಳಿದ್ದರು? ಎಂದು ಕೇಳಿದ್ದೇನೆ.


ನಿಮಗೆ ಆರ್ ಎಸ್ಎಸ್, ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಲು ಗೊತ್ತಿಲ್ಲ ಎಂದಾದರೆ ಮೋದಿ ಸರ್ಕಾರ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಿಸಿದಾಗ ಆಗ ಸುಮ್ಮನಿದ್ದೀರಿ? ನೀವು ನಾರಾಯಣ ಗುರುಗಳ ಹೆಸರು ಹೇಳಿ ಅದೇ ಕೋಟಾದಲ್ಲಿ ಸಚಿವಗಿರಿ ಪಡೆದಿರಿ ಅಲ್ಲವೇ? ನಿಮ್ಮ ಸರ್ಕಾರ ನಾರಾಯಣ ಗುರುಗಳ ಪಠ್ಯ ಕೈಬಿಟ್ಟಿರುವಾಗ ಯಾಕೆ ಮಾತನಾಡುತ್ತಿಲ್ಲ? ಮೋದಿ ಗುಣಗಾನ ಮಾಡಲು ಬಾಯಿ ತುಂಬಿ ಮಾತನಾಡುತ್ತೀರಿ, ಈ ವಿಚಾರದಲ್ಲಿ ಮಾತನಾಡಲು ಬಾಯಿಗೆ ಒಲಿಗೆ ಹಾಕಿಕೊಂಡಿರುತ್ತೀರಾ? ನನ್ನ ಇಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿ ನನ್ನ ಬಗ್ಗೆ ಏನಾದರೂ ಹೇಳಿ. ನಿಮ್ಮ ಕೈಲಾದರೆ ಉತ್ತರಿಸಿ, ಇಲ್ಲದಿದ್ದರೆ ಉತ್ತರಿಸಲು ಆಗುವುದಿಲ್ಲ ಎಂದು ಹೇಳಿಬಿಡಿ ಎಂದು ಖರ್ಗೆ ತಿಳಿಸಿದರು.


ಪಠ್ಯ ಪುಸ್ತಕ ವಿಚಾರ

ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ಹಾಗೂ ಸಮಿತಿಯ ಪ್ರಬುದ್ಧತೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಸಮಿತಿಯಲ್ಲಿ ಒಂದೇ ಸಮುದಾಯದವರಿದ್ದರೆ ದೇಶದ ವೈವಿಧ್ಯತೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದೆ. ಈ ಸರ್ಕಾರ ಪಠ್ಯಪುಸ್ತಕ ಏನನ್ನು ಉಳಿಸಿಲ್ಲ. ಎಲ್ಲ ಸಮಾಜದವರಿಗೂ ಅಪಮಾನ ಮಾಡಲಾಗಿದೆ. ಇದನ್ನು ಮತ್ತೆ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದರು, ನಂತರ ಆಕ್ಷೇಪ ಇದ್ದರೆ ಅದನ್ನು ತಿದ್ದುವುದಾಗಿ ತಿಳಿಸಿದ್ದಾರೆ. ಆದರೆ ಪಠ್ಯ ಪುಸ್ತಕ ಮುದ್ರಣವಾಗಿ ಶಿಕ್ಷಣಾಧಿಕಾರಿ ಕಚೇರಿಗೆ ತಲುಪಿದೆ ಎಂದು ಹೇಳುತ್ತಾರೆ? ಇದೆಲ್ಲ ಹೇಗೆ ಸಾಧ್ಯ? ಬಿಜೆಪಿ ನಾಯಕರ ಮೌನ ನನಗೆ ಅಚ್ಚರಿ ತಂದಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.


ಸರ್ಕಾರದಲ್ಲಿ ಯಾರೆಲ್ಲ ತಮ್ಮ ಸಮಾಜದ ಕೋಟಾದಲ್ಲಿ ಅಧಿಕಾರ ಪಡೆದಿರುವ ಹಿರಿಯ ನಾಯಕರು ಆ ಸಮಾಜದ ಹಿರಿಯರು, ತತ್ವಜ್ಞಾನಿಗಳಿಗೆ ಅಪಮಾನ ಮಾಡಿದಾಗ ಯಾಕೆ ಮೌನವಾಗಿದ್ದಾರೆ. ಬಸವಣ್ಣನವರಿಗೆ ಅಪಮಾನವಾಗಿದೆ ಎಂದು ಎಲ್ಲ ಮಠಗಳು ಸರ್ಕಾರಕ್ಕೆ ಪತ್ರ ಬರೆದಿದ್ದು, ಆದರೂ ಬಿಜೆಪಿಯಲ್ಲಿ ಸ್ಮಶಾನ ಮೌನ ಇದೆ. ಯಡಿಯೂರಪ್ಪನವರು ವಿಚಾರದಲ್ಲಿ ಸರ್ಕಾರದ ತಪ್ಪನ್ನು ತೋರಿ, ಸರಿಯಾದ ಮಾರ್ಗದರ್ಶನ ನೀಡಬೇಕು. ನಾಡಗೀತೆ ವಿಕೃತಗೊಳಿಸಿ ಚಕ್ರತೀರ್ಥ ಕುವೆಂಪು ಅವರಿಗೆ ಅಪಮಾನ ಮಾಡುತ್ತಾರೆ. ಆದರೂ ಸಚಿವರಾದ ಅಶ್ವತ್ಥ್ ನಾರಾಯಣ, ಅಶೋಕ್ ಅವರು ಏನನ್ನು ಹೇಳುತ್ತಿಲ್ಲ. ಇದರಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಕುವೆಂಪು ಅವರು ವಿಶ್ವ ಮಾನವ. ಅವರ ಸಂದೇಶ ಈಗಲೂ ಪ್ರಸ್ತುತವಾಗಿದ್ದು, ನೂರಾರು ವರ್ಷಗಳ ಕಾಲ ಪ್ರಸ್ತುತ ಇರುತ್ತದೆ. ಒಕ್ಕಲಿಗ ಸಂಘದವರು, ಮಠಾಧೀಶರು ಈ ಬಗ್ಗೆ ಆಕ್ಷೇಪ ಎತ್ತಿದಾಗ ಮಾತನಾಡದಿದ್ದರೆ ಈ ಅಪಮಾನಕ್ಕೆ ನಿಮಗೂ ಒಪ್ಪಿಗೆ ಇದೆ ಎಂದು ಅರ್ಥ ಬರುತ್ತದೆ. ಇದು ತಪ್ಪು ಸಂದೇಶ ಸಾರುತ್ತದೆ.

ಇನ್ನು ಶ್ರೀರಾಮುಲು ಅವರು ಕಣ್ಮರೆಯಾಗಿದ್ದಾರೆ. ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಜಾರಿಗೆ ತರಲು ಆಗ್ರಹಿಸಿ ಸಮುದಾಯದ ಸ್ವಾಮೀಜಿ ಹೋರಾಟ ಆರಂಭಿಸಿ 100 ದಿನವಾದರೂ ರಾಮುಲು ಅವರು ನಾಪತ್ತೆ ಆಗಿದ್ದಾರೆ. ಸರ್ಕಾರ ಬರುವ ಮುನ್ನ ರಕ್ತದಲ್ಲಿ ಬರೆದುಕೊಡುವುದಾಗಿ ತಿಳಿಸಿದ್ದೀರಿ. ಸದನದಲ್ಲಿ ಮಾತು ಕೊಟ್ಟಿದ್ದೀರಿ. ಆದರೆ ನಿಮ್ಮ ಸರ್ಕಾರದಲ್ಲಿ ಪರಿಶಿಷ್ಟ ಪಂಗಡದವರಿಗೆ ಅಪಮಾನ ಮಾಡಿದ್ದಾರೆ. ಇವರು ನಾಗರೀಕರಲ್ಲಿ, ನಾಗರೀಕರು, ಸುಸಂಸ್ಕೃತರಲ್ಲ ಎಂದು ಹೇಳಿದ್ದಾರೆ. ನಿಮಗೆ ಏನು ಅನಿಸುವುದಿಲ್ಲವೇ?ವಾಲ್ಮೀಕಿ ಸಮಾಜದಿಂದ ದೇಶದ ಸಂಸ್ಕೃತಿಗೆ ಅತ್ಯಂತ ದೊಡ್ಡ ಕೊಡುಗೆ ಇದೆ. ರಾಮಾಯಣ ಬರೆದಿದ್ದು ವಾಲ್ಮೀಕಿ ಅವರು. ಇವರಿಗೆ ರಾಮ ಬೇಕು ವಾಲ್ಮೀಕಿ ಬೇಡವೇ? ಬಿಜೆಪಿ ಆರ್ ಎಸ್ ಎಸ್ ನವರಿಗೆ ಅಂಬೇಡ್ಕರ್ ಎಂದರೆ ಬಹಳ ಅಲರ್ಜಿ ಇದೆ. ಆದರೆ ಈ ಮಟ್ಟಕ್ಕೆ ಇಳಿಯುತ್ತಾರೆ, ಇತಿಹಾಸದ ಪುಟದಿಂದ ಅಂಬೇಡ್ಕರ್ ಕಿತ್ತು ಬಿಸಾಕುತ್ತಾರೆ ಎಂದು ಭಾವಿಸಿರಲಿಲ್ಲ. ಈ ಸಂಚು ನಡೆದಿದೆ.



Join Whatsapp