ನಮ್ಮ ಶಾಸಕರಿಗೂ ಆತ್ಮಸಾಕ್ಷಿ ಇದೆ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ನಿಖಿಲ್ ಕುಮಾರಸ್ವಾಮಿ

Prasthutha|

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ (ಜೆಡಿಎಸ್) ಮತಗಳನ್ನು ಅಷ್ಟು ಸುಲಭವಾಗಿ ಕಾಂಗ್ರೆಸ್ ಒಡೆಯಲು ಸಾಧ್ಯವಿಲ್ಲ ಜೆಡಿಎಸ್ ನ  ಯುವ  ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇರವಾಗಿ ಹೇಳಿದ್ದಾರೆ.

- Advertisement -

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಮಹಾನಗರ ಯುವ ಜೆಡಿಎಸ್ ಮುಖಂಡರ  ಸಭೆಗೂ  ಮುನ್ನ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ನಿನ್ನೆಯ ದಿನ  ಸಿದ್ದರಾಮಯ್ಯ ಅವರು ಆತ್ಮಸಾಕ್ಷಿಯ ಮತಗಳ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪಕ್ಷದಲ್ಲಿರುವ ಶಾಸಕರಿಗೂ ಆತ್ಮಸಾಕ್ಷಿ ಇದೆ. ನಮ್ಮ  ಮತಗಳನ್ನು ಅಷ್ಟು ಸುಲಭವಾಗಿ ಕಾಂಗ್ರೆಸ್ ಒಡೆಯಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳುತ್ತೇನೆ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

- Advertisement -

ಅಸಮಾನತೆ ಎದ್ದು ಕಾಣುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ. ನಮ್ಮಲ್ಲಿ ಯಾವುದೇ ರೀತಿಯ ಅಸಮಾನತೆ ಇಲ್ಲ. ಕೇವಲ ಒಬ್ಬರು, ಇಬ್ಬರು ಶಾಸಕರಲ್ಲಿ ಮಾತ್ರ ಅಸಮಾಧಾನ ಇತ್ತು. ಅವರ ಅಸಮಾಧಾನವನ್ನು ಸರಿ ಪಡಿಸಿದ್ದೇವೆ. ಹೀಗಾಗಿ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಎಲ್ಲರೂ ನಮ್ಮ ಪಕ್ಷದಲ್ಲಿಯೇ ಇರುತ್ತಾರೆ. ಜೂನ್ 10ರಂದು ಅದು ಸಾಬೀತಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಚಿಹ್ನೆಯ ಮೇಲೆ ಗೆದ್ದಿದ್ದೇನೆಂದು ಐದಾರು ದಿನಗಳ ಹಿಂದಷ್ಟೇ ಮಾಧ್ಯಮಗಳ ಮುಂದೆ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಹೇಳಿದ್ದಾರೆ. ಹಾಗಾಗಿ ಪಕ್ಷದ ಶಾಸಕರ ಮತಗಳು ಬೇರೆ ಕಡೆ ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅವರು ಒತ್ತಿ ಹೇಳಿದರು.

ಯುವ ಘಟಕ ಕ್ರಿಯಾಶೀಲವಾಗಿದೆ:

ಬಿಬಿಎಂಪಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ಸೂಕ್ತ ವ್ಯಕ್ತಿಗಳಿಗೆ ಟಿಕೆಟ್ ನೀಡುತ್ತೇವೆ. ಪಕ್ಷದಲ್ಲಿ ನಾಯಕರು ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ. ಯುವ ಘಟಕ ತುಂಬಾ ಸಕ್ರಿಯವಾಗಿದ್ದು, ಪ್ರತಿಯೊಂದು ವಿಚಾರದಲ್ಲೂ ಪ್ರಚಾರ ಪಡೆಯುತ್ತಿಲ್ಲ. ಯುವ ಘಟಕ ಸುಮ್ಮನೆ ಕುಳಿತಿಲ್ಲ. ಜನತಾ ಜಲಧಾರೆ ಸಮಾವೇಶದಲ್ಲಿ ಪಕ್ಷದ ಯುವ ಘಟಕ ಉತ್ತಮವಾಗಿ ಕೆಲಸ ಮಾಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ಕುವೆಂಪು ಅವರಿಗೆ ಅವಮಾನ ಸರಿಯಲ್ಲ:

ರಾಷ್ಟ್ರಕವಿ ಕುವೆಂಪು ಸಮಾಜದ ದೊಡ್ಡ ವ್ಯಕ್ತಿ. ಅವರಿಗೆ ಅವಮಾನ ಮಾಡಿರೋದನ್ನು ಖಂಡಿಸುತ್ತೇನೆ. ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತು ಗೌರವಿಸುವಂತ ಮಹಾನ್ ಸಾಹಿತಿಗಳು. ನಮ್ಮ ನಾಡಿನ ಪ್ರಾತಃಸ್ಮರಣೀಯರು. ಅಂತಹವರ ಬಗ್ಗೆ ಲಘುವಾಗಿ ಮಾತನಾಡುವುದು ಹಾಗೂ ನಾಡಗೀತೆ ಅಪಮಾನ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ನಿಖಿಲ್ ಅವರು ಹೇಳಿದರು.

ಸಿನಿಮಾದಲ್ಲಿ ಜನ ನನ್ನನ್ನು ಗುರುತಿಸಿದ್ದಾರೆ. ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಸಿನಿಮಾ ಹಾಗೂ ಪಕ್ಷ ಸಂಘಟನೆ ಎರಡನ್ನೂ ನಿಭಾಯಿಸುತ್ತೇನೆ. ಜನರ ಸೇವೆ ಮಾಡಿಕೊಂಡೇ ಎಲ್ಲವನ್ನೂ ನಿಭಾಯಿಸುತ್ತೇನೆ ಎಂದರು ಅವರು.

ರಾಜ್ಯದಲ್ಲಿ ಪ್ರವಾಸ:ಪಕ್ಷ ಸಂಘಟನೆಯೇ ನನ್ನ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡುತ್ತೇನೆ. ಉತ್ತರ ಕರ್ನಾಟಕದಿಂದಲೇ ಪ್ರವಾಸ ಮಾಡುತ್ತೇನೆ ಎಂದು ಇದೇ ವೇಳೆ ನಿಖಿಲ್ ಅವರು ಹೇಳಿದರು.

ರಾಮನಗರದಲ್ಲಿ ಸ್ಪರ್ಧೆ ದೂರದ ಮಾತು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಮನಗರದಿಂದ ನಾನು  ಸ್ಪರ್ಧಿಸುವುದು ದೂರದ ಮಾತು. ನನಗೆ ಪಕ್ಷ ಜವಾಬ್ದಾರಿ ನೀಡಿದ್ದು, ಮೊದಲು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಉಪಸ್ಥಿತರಿದ್ದರು.



Join Whatsapp