►ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧೆ ಮಾಡಿದ್ದಾಗ ನಾವು ಅಭ್ಯರ್ಥಿ ಹಾಕಿದ್ದೆವಾ?
ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ನಮಗಿದೆ, ನಮ್ಮ ಬಳಿ 25 ಹೆಚ್ಚುವರಿ ಮತಗಳಿವೆ, ಎರಡನೇ ಪ್ರಾಶಸ್ತ್ಯದ ಮತಗಳು ನಮಗೆ ಬೀಳುತ್ತವೆ, ಜೆಡಿಎಸ್ ಮತ್ತು ಬಿಜೆಪಿಯವರು ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಮತ ಹಾಕುತ್ತಾರೆ. ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದರಿಂದ ಜೆಡಿಎಸ್ ಪಕ್ಷದ ಮತಗಳು ನಮಗೆ ಸಿಗುತ್ತವೆ ಎಂಬ ನಂಬಿಕೆಯಿದೆ. ಆತ್ಮಸಾಕ್ಷಿ ಮತಗಳು ಇಂತಿಷ್ಟೆ ಬರುತ್ತವೆ ಎಂದು ಈಗಲೇ ಹೇಳಲು ಆಗುವುಲ್ಲ, ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಆತ್ಮಸಾಕ್ಷಿ ಮತಗಳು ನಮಗೆ ಸಿಗುತ್ತದೆ.
ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶ ಕುಮಾರಸ್ವಾಮಿಗೆ ಇದ್ದರೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ನಮಗೆ ಬೆಂಬಲಿಸಲಿ, ನಮ್ಮದು ಜಾತ್ಯತೀತ ಪಕ್ಷ. ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧೆ ಮಾಡಿದ್ದಾಗ ನಾವು ಅಭ್ಯರ್ಥಿ ಹಾಕಿದ್ದೆವಾ? ದೇವೇಗೌಡರು ಗೆದ್ದು ಬರಲಿ, ಬಿಜೆಪಿ ಗೆಲ್ಲಬಾರದು ಎಂದು ಹಾಕಿರಲಿಲ್ಲ, ಜೆಡಿಎಸ್ ನ 37 ಜನ ಶಾಸಕರಿದ್ದರೂ ನಾವು ಕುಮಾರಸ್ವಾಮಿಗೆ ಬೆಂಬಲ ನೀಡಿಲ್ವಾ? ಬಿಜೆಪಿ ಬರಬಾರದು ಎಂದು ಹೀಗೆ ಮಾಡಿದ್ದೆವು, ಕಾಂಗ್ರೆಸ್ ಬೆಂಬಲಿಸದೆ ಹೋದರೆ ದೇವೇಗೌಡರು ಪ್ರಧಾನಿಯಾಗುತ್ತಿದ್ದರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇಬ್ರಾಹಿಂಗೆ ಮಾನ ಮರ್ಯಾದಿ ಇಲ್ಲ. ಪರಿಷತ್ ಸದಸ್ಯ ಮಾಡುತ್ತೇನೆ ಅಂದಿದ್ದರು, ಮಾಡಿದ್ರಾ? ಇಬ್ರಾಹಿಂ ನಾಮಕಾವಸ್ತೆಗೆ ಪಕ್ಷದ ಅಧ್ಯಕ್ಷ ಆಗಿದ್ದಾರೆ, ಕೂತ್ಕೊ ಅಂದ್ರೆ ಕೂತ್ಕೋಬೇಕು, ನಿಂತ್ಕೊ ಅಂದ್ರೆ ನಿಂತ್ಕೊಬೇಕು ಅಷ್ಟೆ. ಅವರ ಬಗ್ಗೆ ಇನ್ನೇನು ಹೇಳೋದು ಎಂದು ವ್ಯಂಗ್ಯವಾಡಿದರು.
ಮೊದಲು ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳಿಸಿದ್ದಕ್ಕೆ ಸರ್ಕಾರ ಬಿದ್ದೋಯ್ತು ಎನ್ನುತ್ತಿದ್ದ ಕುಮಾರಸ್ವಾಮಿ, ಈಗ ಸರ್ಕಾರ ಬಿದ್ದೋಗಲಿ ಎಂದೇ ವಿದೇಶಕ್ಕೆ ಹೋಗಿದ್ದೆ ಎನ್ನುತ್ತಿದ್ದಾರೆ. ಇವೆರಡರಲ್ಲಿ ಯಾವುದು ಸತ್ಯ? ಸರ್ಕಾರ ಬಿದ್ದಾಗ ತಮಗೆ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದರಾ? ಸದನದಲ್ಲಿ ಉತ್ತರ ನೀಡುವಾಗ ಸರ್ಕಾರ ಯಾಕೆ ಬಿತ್ತು ಎಂದು ಅವರೇ ಹೇಳಿದ್ದಾರೆ, ಸದನಕ್ಕೆ ಹೇಳಿದ್ದು ಸುಳ್ಳಾಗುತ್ತಾ? ಈಗ ಹೇಳಿದ್ದನ್ನು ಯಾಕೆ ನಂಬಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ದಲಿತರು ಮತ್ತು ಸಂವಿಧಾನಕ್ಕೆ ಬದ್ಧತೆ ಇರುವ ಪಕ್ಷ, ನಮ್ಮ ಆಡಳಿತದ ಕಾಲದಲ್ಲೇ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಬೇಕು ಎಂದು ಕಾನೂನು ತಂದಿದ್ದು, ಸರ್ಕಾರಿ ಟೆಂಡರ್ ಗಳಲ್ಲಿ ಮೀಸಲಾತಿ ತಂದಿದ್ದು, ಬಡ್ತಿ ಮೀಸಲಾತಿಯನ್ನು ಉಳಿಸಿದ್ದು ನಾವು. ನಮಗೆ ದಲಿತರ ಕಾಳಜಿ ಬಗ್ಗೆ ಯಾರು ಹೇಳಿಕೊಡೋದು ಬೇಡ ಎಂದರು.
ಅಂಬೇಡ್ಕರ್ ಹಿಂದೂ ಅಲ್ಲವೇ? ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣ ಗುರು, ಭಗತ್ ಸಿಂಗ್ ಪಠ್ಯವನ್ನು ತೆಗೆದು ಹಾಕಿದ್ದಾರೆ, ಇವರೆಲ್ಲ ಹಿಂದೂ ಅಲ್ಲವಾ? ಇವರೆಲ್ಲ ಹಿಂದೂಗಳಿಗೆ ವಿರುದ್ಧವಾಗಿ ಬರೆದಿದ್ದಾರ? ಬಿಜೆಪಿಯವರು ಯಾರನ್ನು ಹಿಂದೂ ಅಂತಾರೋ, ಯಾರು ಹಿಂದೂ ಅಲ್ಲ ಅಂತಾರೋ ನಮಗೆ ಗೊತ್ತಿಲ್ಲ. ನಾವು ಹಿಂದೂ ಅಲ್ಲವಾ? ದ್ರುವನಾರಾಯಣ್ ಹಿಂದೂ ಅಲ್ಲವಾ?
ರೋಹಿತ್ ಚಕ್ತತೀರ್ಥ ಅವರು ಕುವೆಂಪು, ಭಗತ್ ಸಿಂಗ್, ಅಂಬೇಡ್ಕರ್ ಅವರಿಗೆ ಪರಿಷ್ಕರಣೆ ಹೆಸರಲ್ಲಿ ಅವಮಾನ ಮಾಡಿದ್ದಾರೆ. ಹಾಗಾಗಿ ಈಗ ಪರಿಷ್ಕರಣೆ ಮಾಡಿದ ಪಠ್ಯವನ್ನು ಕೈಬಿಟ್ಟು ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಿಸಿದ್ದ ಪಠ್ಯವನ್ನು ಮುಂದುವರೆಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಪ್ರತಾಪ್ ಸಿಂಹ ವಕೀಲರಾ? ಅರ್ಥ ಶಾಸ್ತ್ರಜ್ಞರಾ? ಯಡಿಯೂರಪ್ಪ, ಬೊಮ್ಮಾಯಿ ಅರ್ಥಶಾಸ್ತ್ರಜ್ಞರ? ಪ್ರತಾಪ್ ಸಿಂಹ ಅರ್ಥಶಾಸ್ತ್ರಜ್ಞ ಆಗಿದ್ದರೆ ತಾನೇ ತಾನು ಹೇಳ್ತಿರೋದು ಸರಿ ಅಥವಾ ತಪ್ಪು ಎಂದು ಗೊತ್ತಾಗೋದು. ಅವರಿಗೆ ಅರ್ಥಶಾಸ್ತ್ರದ ಜ್ಞಾನ ಇಲ್ಲದೆ ನಾನು ಮಾಡಿದ್ದು ತಪ್ಪು ಎಂದು ಹೇಗೆ ಹೇಳ್ತಾರೆ? ಅದೆಲ್ಲ ಬೇಡ ನಾನು ಲಕ್ಷ್ಮಣ್ ಅವರನ್ನು ಕಳಿಸ್ತೀನಿ, ಪ್ರತಾಪ್ ಸಿಂಹ ಅವರು ಒಂದೇ ವೇದಿಕೆಯಲ್ಲಿ ಲಕ್ಷ್ಮಣ್ ಜೊತೆ ವಾದ ಮಾಡಲಿ. ಯಾರು ಸರಿ, ತಪ್ಪು ಗೊತ್ತಾಗುತ್ತೆ. ಪ್ರತಾಪ್ ಸಿಂಹ ಮೈಸೂರಿಗಾಗಿ ಏನು ಮಾಡಿದ್ದಾರೆ, ನಾನೇನು ಮಾಡಿದ್ದೀನಿ ಚರ್ಚೆ ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ, ಆಸ್ಕರ್ ಫರ್ನಾಂಡೀಸ್ ಅವರು ಕೇಂದ್ರ ಸಚಿವರಾಗಿದ್ದರು, ಆಗ ಮೈಸೂರು- ಬೆಂಗಳೂರು ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದ್ದು. ಮೈಸೂರು ನಗರಕ್ಕೆ ಪ್ರತಾಪ್ ಸಿಂಹ ಏನು ಕೆಲಸ ಮಾಡಿದ್ದಾರೆ ಹೇಳಲಿ. ಜೈದೇವಾ ತಂದವರು ಯಾರು? ಜಿಲ್ಲಾಸ್ಪತ್ರೆ ತಂದವರು ಯಾರು? ಕಾಲೇಜು, ಹಾಸ್ಟೆಲ್, ಡಿ.ಸಿ ಕಚೇರಿ, ಅಂಬೇಡ್ಕರ್ ಭವನ ಇದೆಲ್ಲ ಮಾಡಿದ್ದು ಯಾರು? ಪ್ರತಾಪ್ ಸಿಂಹನ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.