ಲಕ್ನೋ: ಅಕ್ರಮ ಗೋ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಠಾಣಾ ಉಸ್ತುವಾರಿ ಸೇರಿದಂತೆ ಏಳು ಮಂದಿ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
20 ವರ್ಷದ ರೆಹಾನ್ ದಿನಗೂಲಿ ಕೆಲಸಗಾರನಾಗಿದ್ದು, ಮೇ 2 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಜಾನುವಾರು ಸಾಗಣೆದಾರರ ಗುಂಪಿಗೆ ನೆರವು ನೀಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ನಂತರ ಆತನ ಮೇಲೆ ಲಾಠಿಯಿಂದ ಕ್ರೂರವಾಗಿ ಹಲ್ಲೆ ನಡೆಸಲಾಗಿದ್ದು, ವಿದ್ಯುತ್ ಶಾಕ್ ನೀಡಿದ್ದಾರೆ. ಆತನ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ. ಆತನನ್ನು ಕಸ್ಟಡಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೀಗ ತೀವ್ರವಾಗಿ ಗಾಯಗೊಂಡಿರುವ ರೆಹಾನ್‍ಗೆ ನಡೆಯಲು ಮತ್ತು ಮಾತನಾಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆತನನ್ನು ಬಿಡುಗಡೆಗೊಳಿಸಬೇಕಾದರೆ 5 ಸಾವಿರ ಲಂಚ ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಕೊನೆಗೆ 5,000 ರೂ. ದಂಡ ನೀಡಿದ ಬಳಿಕ ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಆತನ ಚಿಕಿತ್ಸೆಗಾಗಿ ಪೊಲೀಸರು 100 ರೂ. ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೀಗ ಏಳು ಮಂದಿ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಐವರನ್ನು ಅಮಾನತುಗೊಳಿಸಲಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ತೀವ್ರ ಗಾಯ ಮಾಡಿರುವುದು ಮತ್ತು ಅಪರಾಧ ಬೆದರಿಕೆ ಹಾಗೂ ಇತರೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ನಗರ ಪೊಲೀಸ್ ಹಿರಿಯ ಅಧಿಕಾರಿ ಪ್ರವೀಣ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ