ಕಾಶ್ಮೀರದ ವ್ಯಕ್ತಿ ಮಕ್ಕಾದಲ್ಲಿ ನಿಧನ: ಅಂತ್ಯಕ್ರಿಯೆ ನೆರವೇರಿಸಿದ ಐಎಸ್ ಎಫ್

Prasthutha|

ಮಕ್ಕಾ: ಉಮ್ರಾ ನಿರ್ವಹಣೆಗಾಗಿ ಮಕ್ಕಾಗೆ ಆಗಮಿಸಿದ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಬ್ದುಲ್ ಖಾಲಿಕ್ ಧಾರ್ ಎನ್ನುವವರು ಮಕ್ಕಾದಲ್ಲಿ ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರು ಮಕ್ಕಾದಲ್ಲಿ ನೆರವೇರಿಸಿದ್ದಾರೆ.

- Advertisement -


ಉಮ್ರಾ ಗ್ರೂಪ್ ನಲ್ಲಿ ಉಮ್ರಾ ನಿರ್ವಹಣೆಗೆ ಬಂದ ಖಾಲಿಕ್ ಅವರು ತಮ್ಮ ಗ್ರೂಪ್ ನಿಂದ ಬೇರ್ಪಟ್ಟು ಹಲವು ದಿನಗಳ ಕಾಲ ನಾಪತ್ತೆಯಾಗಿದ್ದರು. ಎಷ್ಟೇ ಹುಡುಕಾಡಿದರೂ ಪತ್ತೆಯಾಗದ ಇವರನ್ನು ತೊರೆದು ಸಹ ಯಾತ್ರಿಗಳು ಭಾರತಕ್ಕೆ ವಾಪಸಾಗಿದ್ದರು. ಹಲವು ದಿನಗಳ ತರುವಾಯ ಖಾಲಿಕ್ ಅವರ ಮೃತದೇಹ ಮಕ್ಕಾದ ಆಸ್ಪತ್ರೆಯ ಶವಾಗಾರದಲ್ಲಿ ಇರುವ ವಿಷಯ ಅವರು ಬಂದ ಟ್ರಾವೆಲ್ ಏಜನ್ಸಿ ಮುಖಾಂತರ ಕುಟುಂಬ ವರ್ಗಕ್ಕೆ ಸಿಕ್ಕಿತ್ತು. ಸೌದಿಯಲ್ಲಿರುವ ಅವರ ಆಪ್ತ ಬಂಧುಗಳಿಗೆ ವಿಷಯ ಮುಟ್ಟಿಸಿದರು, ಅವರು ಜಿದ್ದಾ ಇಂಡಿಯನ್ ಸೋಶಿಯಲ್ ಫೋರಮ್ ನ ಮುಸ್ತಫಾ ಪುಣಚ ಮತ್ತು ತೌಸೀಫ್ ನಿಟ್ಟೆಯವರಿಗೆ ವಿಷಯ ತಿಳಿಸಿದ್ದು, ತಕ್ಷಣ ಅವರು ಮಕ್ಕಾ ಇಂಡಿಯನ್ ಸೋಶಿಯಲ್ ಫೋರಮ್ ಅಧ್ಯಕ್ಷ ಶಾಕಿರ್ ಹಕ್ ನೆಲ್ಯಾಡಿ ಅವರಿಗೆ ಮಾಹಿತಿ ನೀಡಿ ಅಂತ್ಯ ಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡಲು ಸೂಚಿಸಿದ್ದರು.


ಮೃತರ ಕುಟುಂಬಿಕರು ಯಾರೂ ಸೌದಿಯಲ್ಲಿ ಇರದ ಕಾರಣ ಇಂಡಿಯನ್ ಸೋಶಿಯಲ್ ಫೋರಮ್ ನ ಹಮೀದ್ ಫಜೀರ್ ಅವರಿಗೆ ಮೃತರ ಕುಟುಂಬಸ್ಥರು ಮೃತ ದೇಹದ ಅಂತ್ಯ ಕ್ರಿಯೆಗೆ ಬೇಕಾದ ಪವರ್ ಆಫ್ ಅಟಾರ್ನಿ ನೀಡಿದರು. ಎಲ್ಲಾ ದಾಖಲೆ ಪತ್ರಗಳನ್ನು ಹಮೀದ್ ಫಜೀರ್ ರವರು ಸಂಗ್ರಹಿಸಿ ಜೂನ್ 5ರಂದು ಪವಿತ್ರ ಹರಮ್ ನಲ್ಲಿ ಜನಾಝ ನಮಾಝ್ ನಿರ್ವಹಿಸಿ ಹರಮ್ ಪರಿಸರದ ಶರಾಯ ದಫನ ಭೂಮಿಯಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಯಿತು. ಅಂತ್ಯ ಕ್ರಿಯೆಯಲ್ಲಿ ಫಾರೂಕ್ ಕಲ್ಲಡ್ಕ, ಮನ್ಸೂರ್ ಅಹ್ಮದ್ ಶ್ರೀನಗರ ಮತ್ತಿತರರು ಭಾಗವಹಿಸಿದ್ದರು.



Join Whatsapp