ಕೃಷಿಯ ಕೊಲೆ ಬಿಜೆಪಿಯ ಸಾಧನೆ: ಸಿದ್ದರಾಮಯ್ಯ ಟೀಕೆ

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷಗಳ ಸಾಧನೆಯೆಂದರೆ ಕೃಷಿ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿ, ಅದನ್ನು ಕಾರ್ಪೊರೇಟ್ ಬಂಡವಾಳಿಗರ ಕಾಲ ಕೆಳಕ್ಕೆ ಅ ತಳ್ಳಿರುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -


ಕಳೆದ 8 ವರ್ಷಗಳಲ್ಲಿ ಮೋದಿಯವರು ಹೇಳಿದ ಸುಳ್ಳುಗಳಿಗೆ ಲೆಕ್ಕವೆ ಇಲ್ಲ. ಅವುಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದೂ ಸೇರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 28-2-2016 ರಂದು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಭಾಷಣ ಮಾಡುವಾಗ 2022 ರ ಒಳಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಘೊಷಣೆ ಮಾಡಿದರು. ಆ ನಂತರ ಈ ಘೋಷಣೆಯನ್ನು ಬಜೆಟ್ನಲ್ಲಿ ಸೇರಿಸಲಾಯಿತು. ನ್ಯಾಷನಲ್ ಸ್ಯಾಂಪಲ್ ಸರ್ವೆಯವರ ಪ್ರಕಾರ 2015-16 ರಲ್ಲಿ ಪ್ರತಿ ರೈತ ಕುಟುಂಬದ ವಾರ್ಷಿಕ ಆದಾಯ 96703 ರೂಗಳಷ್ಟಿರುತ್ತದೆಂದು ಅಂದಾಜಿಸಲಾಗಿತ್ತು. ಅಂದರೆ ಒಂದು ಕೃಷಿ ಕುಟುಂಬದ ತಿಂಗಳ ಸರಾಸರಿ ಆದಾಯ 8000 ರೂ ಎಂದಾಯಿತು. ಈ ಎಂಟು ಸಾವಿರ ರೂಪಾಯಿಗಳಲ್ಲಿ ಸರಾಸರಿ ಶೇ.43 ರಷ್ಟು ಕೂಲಿಯಿಂದ ಬರುತ್ತಿದೆ ಎಂದು ವರದಿಗಳು ಹೇಳುತ್ತಿವೆ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.


2022 ರಲ್ಲಿ ಇದು ದ್ವಿಗುಣಗೊಳ್ಳಬೇಕಾದರೆ 2015-16 ರ ಬೆಲೆಗಳಲ್ಲಿ ಲೆಕ್ಕ ಹಾಕಿದರೆ ಸರಾಸರಿ ಪ್ರತಿ ರೈತ ಕುಟುಂಬದ ತಿಂಗಳ ಆದಾಯ 16000 ರೂಗಳಿಗೆ ಏರಿಕೆಯಾಗಬೇಕು. ವರ್ಷಕ್ಕೆ 172694 ರೂಗಳಷ್ಟಾಗಬೇಕು. ಇಂದಿನ ಬೆಲೆಗಳಲ್ಲಿ, ಹಣದುಬ್ಬರವನ್ನು ಸೇರಿಸಿ ಲೆಕ್ಕ ಹಾಕಿದರೆ 2.5 ರಿಂದ 2.8 ಲಕ್ಷ ರೂಪಾಯಿಗಳಾಗಬೇಕು ಅಥವಾ ತಿಂಗಳಿಗೆ 22 ರಿಂದ 25 ಸಾವಿರ ರೂಪಾಯಿಗಳಾಗಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳ್ಳಬೇಕಾಗಿದ್ದರೆ 2016 ರಿಂದಲೆ ನಿರಂತರವಾಗಿ ಕೃಷಿ ಕ್ಷೇತ್ರದ ಬೆಳವಣಿಗೆ ಪ್ರತಿ ವರ್ಷ ಸುಮಾರು ಶೇ. 10.5 ರಷ್ಟು ಇರಬೇಕಾಗಿತ್ತು. ಆದರೆ ವಾಸ್ತವವಾಗಿ ಬೆಳವಣಿಗೆಯಾಗಿದ್ದು ಕೇವಲ 2.88 ರಷ್ಟು ಮಾತ್ರ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ಹೇಳುತ್ತವೆ. 2019-20 ರಲ್ಲಿ ಎನ್ಎಸ್ಎಸ್ಒ ಹಲವು ಆಯಾಮಗಳಲ್ಲಿ ಸಮೀಕ್ಷೆ ಮಾಡಿತು. ಆದರೆ ಸಮೀಕ್ಷೆಯ ವರದಿಗಳನ್ನು ಗುಪ್ತವಾಗಿ ಪರಿಶೀಲಿಸಿದ ಕೇಂದ್ರ ಸರ್ಕಾರಕ್ಕೆ, ಆ ವರದಿಯು ತನಗೆ ವ್ಯತಿರಿಕ್ತವಾಗಿ ಎಂದು ಅನ್ನಿಸಿದ ಕಾರಣ ಅದನ್ನು ಬಿಡುಗಡೆ ಮಾಡಲಿಲ್ಲ. ಆದರೂ ಆ ವರದಿ ಮಾಧ್ಯಮಗಳಿಗೆ ಸೋರಿಕೆಯಾಯಿತು. ಸರ್ಕಾರದ ಡೇಟಾ ನೋಡಿದರೂ ಕೂಡ ಮನಮೋಹನಸಿಂಗ್ ಅವರ ಯುಪಿಎ ಅವಧಿಯಲ್ಲಿ ಕೃಷಿಯ ಜಿವಿಎ ಬೆಳವಣಿಗೆ ದರ ಸರಾಸರಿ ಶೇ. 4.6 ಕ್ಕಿಂತ ಹೆಚ್ಚಿಗೆ ಇತ್ತು. ಮೋದಿಯವರ ಕಾಲದಲ್ಲಿ ಕೇವಲ ಶೇ. 3.3 ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.

- Advertisement -


ಇಷ್ಟೆಲ್ಲ ಆದರೂ ಮೋದಿಯವರ ಸರ್ಕಾರ ಜಾಹಿರಾತು ಕೊಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕೃಷಿಕರ ಉಳಿವಿಗಾಗಿ ಎಂಎಸ್ಪಿ ಹೆಚ್ಚಿಸಿದ್ದೇವೆ ಎಂದು ಹೇಳುತ್ತಾರೆ. ವಾಸ್ತವವಾಗಿ ಯುಪಿಎ ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆ ಮತ್ತು ಮೋದಿ ಸರ್ಕಾರ ನಿಗಧಿಪಡಿಸಿದ ಬೆಲೆಗಳ ನಡುವೆ ಅಗಾಧ ವ್ಯತ್ಯಾಸವಿದೆ.

ಮನಮೋಹನಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ 2004 ರಿಂದ 2013-14 ರ ವೇಳೆಗೆ ಹಲವಾರು ಕೃಷಿ ಉತ್ಪನ್ನಗಳಿಗೆ ಶೇ. 204 ರ ವರೆಗೆ ಬೆಂಬಲ ಬೆಲೆ ಹೆಚ್ಚಿಸಿದ್ದರು. ಭತ್ತದ ಮೇಲೆ ನೀಡುವ ಎಂಎಸ್ಪಿ ಶೇ.126 ರಷ್ಟು ಹೆಚ್ಚು ಮಾಡಿದ್ದರು. ಮೋದಿಯವರು ಈ 8 ವರ್ಷಗಳಲ್ಲಿ ಭತ್ತದ ಎಂಎಸ್ಪಿಯನ್ನು ಕೇವಲ ಶೇ.44 ರಷ್ಟು ಹೆಚ್ಚಿಸಿದ್ದಾರೆ. ತೊಗರಿಯ ಬೆಂಬಲ ಬೆಲೆಯನ್ನು ಮನಮೋಹನಸಿಂಗರು ಶೇ.204 ರಷ್ಟು ಹೆಚ್ಚಿಸಿದ್ದರೆ ಮೋದಿಯವರು ಶೇ.44 ರಷ್ಟು ಹೆಚ್ಚಿಸಿದ್ದಾರೆ. ಬಿಳಿಜೋಳದ ಮೇಲೆ ಶೇ.178 ರಷ್ಟು ಹೆಚ್ಚಿಸಿದ್ದರೆ ಮೋದಿಯವರ ಸರ್ಕಾರ ಕೇವಲ ಶೇ.78 ರಷ್ಟು ಹೆಚ್ಚಿಸಿದೆ. ಶೇಂಗಾ ಪರಿಸ್ಥಿತಿಯೂ ಅಷ್ಟೆ ಯುಪಿಎ ಸರ್ಕಾರ ಶೇ. 163 ರಷ್ಟು ಹೆಚ್ಚಿಸಿತ್ತು. ಬಿಜೆಪಿ ಸರ್ಕಾರ ಕೇವಲ ಶೇ. 31.5 ರಷ್ಟು ಹೆಚ್ಚಿಸಿದೆ. ಹೆಸರು ಕಾಳಿನ ಮೇಲಿನ ಎಂಎಸ್ ಪಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಶೇ.196 ರಷ್ಟು ಹೆಚ್ಚಿಸಿದ್ದರೆ ಬಿಜೆಪಿ ಸರ್ಕಾರ ಕೇವಲ ಶೇ.56 ರಷ್ಟು ಹೆಚ್ಚಿಸಿದೆ ಎಂದು ವಿರೋಧ ಪಕ್ಷದ ನಾಯಕ ತಿಳಿಸಿದರು.


ಬಿಜೆಪಿಯವರು ಮುಗ್ಧ ಜನರಿಗೆ ಇನ್ನೊಂದು ಸುಳ್ಳು ಹೇಳುತ್ತಿದ್ದಾರೆ. ಮೋದಿ ಸರ್ಕಾರ ಎಂಎಸ್ ಪಿಯಡಿ ಕರ್ನಾಟಕದ ರೈತರಿಂದ ಸಿಕ್ಕಾಪಟ್ಟೆ ಖರೀದಿಸಿ ಜನರಿಗೆ ಅನುಕೂಲ ಮಾಡಿದೆ ಎನ್ನುವುದು ಆ ಸುಳ್ಳು. ವಾಸ್ತವದಲ್ಲಿ ಮನಮೋಹನಸಿಂಗ್ ಅವರ ಸರ್ಕಾರ ಕರ್ನಾಟಕದ ರೈತರಿಂದ 360.79 ಲಕ್ಷ ಕ್ವಿಂಟಾಲ್ಗಳನ್ನು ಖರೀದಿಸಿತ್ತು. ಮೋದಿಯವರ ಸರ್ಕಾರ 2014 ರಿಂದ 2021 ರ ವರೆಗೆ 340.7 ಲಕ್ಷ ಟನ್ ಗಳನ್ನು ಮಾತ್ರ ಖರೀದಿಸಿದೆ. ಕಾಂಗ್ರೆಸ್ ಪಕ್ಷವು ಭಾರತದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 6000 ಸಾವಿರ ರೂಪಾಯಿಯಂತೆ ವರ್ಷಕ್ಕೆ 72000 ರೂಪಾಯಿಗಳನ್ನು ಅವರ ಖಾತೆಗೆ ಹಾಕುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಮೋದಿಯವರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದು ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂಪಾಯಿಗಳನ್ನು ನೀಡುತ್ತಿದೆ. ಅಂದರೆ ತಿಂಗಳಿಗೆ 500 ಮಾತ್ರ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ನೀಡುವ ಹಣದ ಜೊತೆಗೆ ತಿಂಗಳಿಗೆ 333 ರೂಪಾಯಿ ನೀಡುವುದಾಗಿ ಯಡಿಯೂರಪ್ಪನವರು ಘೋಷಿಸಿದ್ದರು. ಆದರೆ ಕಳೆದ ವರ್ಷದವರೆಗೆ 47 ಲಕ್ಷ ರೈತ ಕುಟುಂಬಗಳಿಗೆ ತಿಂಗಳಿಗೆ ನೀಡಿದ್ದು ಕೇವಲ 166 ರೂಪಾಯಿ ಮಾತ್ರ. ಇದು ಬಿಜೆಪಿಯವರ ಸಾಧನೆ. ಕೃಷಿಕರ ಆದಾಯ 8 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಬದಲು ಅವರ ಸಾಲದ ಪ್ರಮಾಣ ದ್ವಿಗುಣಗೊಳ್ಳುತ್ತಿದೆ ಎಂದು ಅವರು ಟೀಕಿಸಿದರು.
2014 ರಿಂದ 2019 ರ ವರೆಗಿನ ಸರ್ಕಾರದ ಅಂಕಿ ಅಂಶಗಳನ್ನು ನೋಡಿದರೆ ರೈತರ ಸಾಲದ ಪ್ರಮಾಣ ಶೇ. 53 ರಷ್ಟು ಹೆಚ್ಚಾಗಿತ್ತು. ಆ ನಂತರದ ಈ ಮೂರು ವರ್ಷಗಳಲ್ಲಿ ಅದರ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಮೋದಿಯವರು ಕಾಂಗ್ರೆಸ್ ಸರ್ಕಾರದ ಕಾಲದ ಬೆಳೆಯ ವಿಮಾ ಯೋಜನೆಯನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಎಂದು ಹೆಸರು ಬದಲಿಸಿ ಜಾರಿಗೆ ತಂದರು. ಈ ಯೋಜನೆ ಸಮರ್ಪಕವಾಗಿಲ್ಲವೆಂದು ತಿಳಿದ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೆ ಕೈ ಬಿಟ್ಟು, ಆಯಾ ರಾಜ್ಯಗಳೆ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿವೆ. ದೇಶದ ಕೃಷಿಕರ ಪರಿಸ್ಥಿತಿ ತೀವ್ರ ಆತಂಕದಲ್ಲಿದೆ. ರೈತರಲ್ಲಿ ಶೇ.87 ರಷ್ಟು ಕುಟುಂಬಗಳು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ಪ್ರತಿ ದಿನ ದೇಶದಲ್ಲಿ ಸಾವಿರಾರು ರೈತರು ಕೃಷಿಯನ್ನು ತೊರೆಯುತ್ತಿದ್ದಾರೆಂದು ವರದಿಗಳು ಹೇಳುತ್ತಿವೆ.

ಕೊರೋನ ಅಟ್ಟಹಾಸ ಮಾಡುತ್ತಿದ್ದಾಗ ಮೋದಿಯವರು ಕರಾಳ ಕೃಷಿ ಕಾಯ್ದೆಗಳನ್ನು ತಂದು ಅದಾನಿ, ಅಂಬಾನಿಗಳಂಥ ಬೃಹತ್ ಕಾರ್ಪೊರೇಟ್ ಬಂಡವಾಳಿಗರಿಗೆ ಅನುಕೂಲ ಮಾಡಿಕೊಡಲು ಹೊರಟರು. ರೈತರು ನಡೆಸಿದ ಧೀರೋದಾತ್ತ ಹೋರಾಟದಿಂದಾಗಿ ಕಾಯ್ದೆಗಳನ್ನು ವಾಪಸ್ಸು ಪಡೆದರು. ಆದರೆ ನಮ್ಮ ರಾಜ್ಯದಲ್ಲಿ ಎಪಿಎಂಸಿಗಳು ಸಂಪೂರ್ಣ ಮುಳುಗಿ ಹೋಗುತ್ತಿದ್ದರೂ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿಲ್ಲ. ಫಲವತ್ತಾದ ಭೂಮಿ ಬಂಡವಾಳಿಗರ ಕೈ ಸೇರುತ್ತಿದ್ದರೂ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಹಿಂದಕ್ಕೆ ಪಡೆದಿಲ್ಲ. ಇದರ ಜೊತೆಗೆ ಕೃಷಿಗೆ ನೀಡುವ ಸಬ್ಸಿಡಿಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ರೈತರು ತಮ್ಮ ಮನೆಗಳಲ್ಲಿನ ಚಿನ್ನವನ್ನು ಅಡ ಇಟ್ಟು ಸಾಲ ತರುತ್ತಿದ್ದಾರೆ. ಬೆಳೆ ಬಂದಾಗ ಬೆಲೆ ಸಿಗುತ್ತಿಲ್ಲ. ಸರ್ಕಾರದ ಭ್ರಷ್ಟಾಚಾರದಿಂದಾಗಿ ಕಳಪೆ ಔಷಧ, ಬೀಜ, ಗೊಬ್ಬರ ಮಾರುಕಟ್ಟೆಯಲ್ಲಿ ತುಂಬಿದೆ. ಇದನ್ನು ನಿಯಂತ್ರಣ ಮಾಡುವ ಶಕ್ತಿಯಾಗಲಿ, ಉದ್ದೇಶವಾಗಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.



Join Whatsapp