ಚಾರ್ಮಾಡಿ ಘಾಟಿಯಲ್ಲಿ ಶೋಕಿ ಡ್ರೈವ್: ಆತಂಕದಲ್ಲಿ ನಾಗರಿಕರು

Prasthutha|

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ರಸ್ತೆಯನ್ನು ಈಗಾಗಲೇ ಅಪಘಾತಗಳ ರಸ್ತೆ ಎನ್ನುತ್ತಾರೆ. ಆದರೆ ಈಗ ಪ್ರವಾಸಿಗರ ಹೊಸ ಶೋಕಿ ಮತ್ತಷ್ಟು ಅಪಘಾತಗಳಿಗೆ ಕಾರಣವಾಗಬಹುದೇ ಎಂಬ ಪ್ರಶ್ನೆ ಮೂಡಿದೆ.
ಈ ದಾರಿಯಾಗಿ ಸಂಚರಿಸುವ ಕೆಲವು ಪ್ರವಾಸಿಗರು ತಮ್ಮ ಐಶಾರಾಮಿ ಗಾಡಿಗಳ ಸನ್ ರೂಫ್ ಓಪನ್ ಮಾಡಿ ಮೋಜು-ಮಸ್ತಿ ಮಾಡಿಕೊಂಡು ಹೋಗುತ್ತಿದ್ದು, ಸ್ಥಳೀಯರು ಹಾಗೂ ಇತರ ಪ್ರವಾಸಿಗರಿಗೆ ಆತಂಕ ತಂದೊಡ್ಡಿದೆ.

- Advertisement -

ಹೆಚ್ಚಿನ ತಿರುವುಗಳಿರುವ ಈ ರಸ್ತೆಯಲ್ಲಿ ಸನ್ ರೂಪ್ ಓಪನ್ ಮಾಡಿಕೊಂಡು ಹಾವಿನ ತರ ತಲೆ ಹೊರಗಡೆ ಹಾಕಿಕೊಂಡು ಹೋಗುವುದು ಖುಷಿ ಕೊಡಬಹುದಾದರೂ ಅಷ್ಟೆ ಅಪಾಯಕಾರಿಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ವಾಹನ ಚಲಾಯಿಸುವಾಗ ಡ್ರೈವರ್ ಸೀಟಲ್ಲಿ ಕೂತವರು ಹದ್ದಿನ ಕಣ್ಣಿನಲ್ಲಿ ಡ್ರೈವ್ ಮಾಡಬೇಕು. ಎಷ್ಟೇ ಜಾಗರೂಕರಾಗಿದ್ದರೂ ಇಲ್ಲಿ ಡ್ರೈವಿಂಗ್ ತುಂಬಾನೇ ಕಷ್ಟ. ಇಂತಹ ಜಾಗದಲ್ಲಿ ಸನ್ ರೂಫ್ ಓಪನ್ ಮಾಡಿ ಕೂಗಿಕೊಂಡು ಹೋದರೆ ಡ್ರೈವರ್ ತಿರುಗಿ ನೋಡಿ ಮತ್ತೆ ರಸ್ತೆ ನೋಡುವಷ್ಟರಲ್ಲಿ ಅಪಘಾತಗಳು ಸಂಭವಿಸಿರುತ್ತವೆ. ಹಾಗಾಗಿ, ಪ್ರವಾಸಿಗರು ಚಾರ್ಮಾಡಿಯಂತಹ ಅಪಾಯದ ರಸ್ತೆಯಲ್ಲಿ ಇಂತಹ ಶೋಕಿಗೆ ಮುಂದಾಗಬಾರದು ಎಂದು ಕೆಲ ಪ್ರವಾಸಿಗರು ಮನವಿ ಮಾಡಿದ್ದಾರೆ.

ಈಗಾಗಲೇ ಚಾರ್ಮಾಡಿಯಲ್ಲಿ ಆಗಾಗ್ಗೆ ಅಪಘಾತಗಳು ನಡೆಯುತ್ತಲೇ ಇದ್ದು, ಕೆಲ ಅಪಘಾತದಲ್ಲಿ ಚಾಲಕರ ಬೇಜವಾಬ್ದಾರಿ ಹಾಗೂ ಕೆಲ ಶೋಕಿಗಳೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಪ್ರವಾಸಿಗರ ಈ ಶೋಕಿ ಮತ್ತೋರ್ವ ಪ್ರವಾಸಿಗನಿಗೆ ಮುಳ್ಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಾರ್ಮಾಡಿ ರಸ್ತೆಯ ಒಂದು ಬದಿ ಎತ್ತರದ ಪರ್ವತಗಳಾದರೆ, ಮತ್ತೊಂದು ಬದಿಯಲ್ಲಿರುವುದು ಸಾವಿರಾರು ಅಡಿ ಆಳದ ಪ್ರಪಾತ. ಹುಡುಕುವುದಕ್ಕೆ ಎರಡು ಮೂರು ದಿನಗಳೇ ಬೇಕಾಗಬಹುದು.
ಇಲ್ಲಿ ವಾರಕ್ಕೆ ನಾಲ್ಕೈದು ಅಪಘಾತಗಳು ನಡೆಯುವುದು ಸಾಮಾನ್ಯವಾಗಿದೆ. ಆ ವೇಳೆ ಹಗಲು-ರಾತ್ರಿಯೆನ್ನದೆ ಓಡಿಹೋಗುವುದು ಕೊಟ್ಟಿಗೆಹಾರದ ಜನ. ಪ್ರವಾಸಿಗರ ಈ ಶೋಕಿಗೆ ಕೊಟ್ಟಿಗೆಹಾರದ ಜನ ಕೂಡ ಇಂತಹಾ ಮೋಜು ಈ ರಸ್ತೆಯಲ್ಲಿ ಬೇಡ ಎಂದು ಮನವಿ ಮಾಡಿದ್ದಾರೆ. ಕೆಲ ಪ್ರವಾಸಿಗರ ಶೋಕಿಯಿಂದ ಮತೋರ್ವ ಪ್ರವಾಸಿಗರ ಪ್ರಾಣ ಹೋದರೆ ಯಾರಿಂದಲೂ ತರಲು ಸಾಧ್ಯವಿಲ್ಲ. ಹಾಗಾಗಿ, ಈ ಭಾಗದಲ್ಲಿ ಗಸ್ತು ತಿರುಗುವ ಪೊಲೀಸರು ಇಂತಹ ವಾಹನಗಳು ಕಂಡು ಬಂದರೆ ಅವರಿಗೆ ಭಾರೀ ಮೊತ್ತದ ದಂಡ ವಿಧಿಸಿ, ವಾಹನವನ್ನು ಜಪ್ತಿ ಮಾಡಬೇಕೆಂದು ಮನವಿ ಮಾಡಿದ್ದಾರೆ.



Join Whatsapp