ಪೂರ್ವಗ್ರಹ ಪೀಡಿತ ಅಧ್ಯಕ್ಷನನ್ನು ಕಿತ್ತುಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?: ಸಿದ್ದರಾಮಯ್ಯ

Prasthutha|

ಬೆಂಗಳೂರು: ವಿಸರ್ಜನೆ ಮಾಡಬೇಕಾಗಿರುವು ಪರಿಷ್ಕೃತ ಪಠ್ಯವನ್ನು, ಈಗಾಗಲೇ ಅವಧಿ ಮುಗಿದಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನಲ್ಲ. ಪೂರ್ವಗ್ರಹ ಪೀಡಿತ ಅಧ್ಯಕ್ಷನನ್ನು ಕಿತ್ತುಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -


ಈ ಸಂಬಂಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಜನತೆಯಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸುವಂತಹ ಸ್ಪಷ್ಟತೆ ರಾಜ್ಯದ ಮುಖ್ಯಮಂತ್ರಿ ಅವರ ಮಾತಿನಲ್ಲಿ ಇರಬೇಕು. ಇವರ ಮಾತು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಬೋಧಿಸಲಿರುವುದು ಹಳೆಯ ಪಠ್ಯವೇ? ಪರಿಷ್ಕೃತ ಪಠ್ಯವೇ? ಎಂದು ಪ್ರಶ್ನಿಸಿದ್ದಾರೆ.


ಬಸವಣ್ಣನವರ ವಿಚಾರವೂ ಸೇರಿದಂತೆ ಆಕ್ಷೇಪ ವ್ಯಕ್ತವಾಗಿರುವ ಅಂಶಗಳನ್ನು ಪರಿಷ್ಕರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಿದ್ದರೆ ಈಗಿನ ಪರಿಷ್ಕೃತ ಪಠ್ಯವನ್ನು ಕೈಬಿಡಲಾಗುವುದೇ? ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

- Advertisement -


ನಾಡಿನ ಹಲವಾರು ಹಿರಿಯ ಸಾಹಿತಿಗಳು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿರುವ ತಮ್ಮ ಕೃತಿಗಳನ್ನು ವಾಪಸು ಪಡೆದಿದ್ದಾರೆ. ರಾಜ್ಯ ಬಿಜೆಪಿ ಸರಕಾರ ತಮ್ಮ ಅಭಿಪ್ರಾಯವನ್ನು ಧಿಕ್ಕರಿಸಿದರೆ ಕಾನೂನು ಹೋರಾಟ ಮಾಡುವುದಾಗಿ ಈ ಸಾಹಿತಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ವಿವಾದಾತ್ಮಕ ಪಠ್ಯವನ್ನು ಬೋಧಿಸಲು ಹೇಗೆ ಸಾಧ್ಯ? ಎಂದು ಅವರು ಕೇಳಿದ್ದಾರೆ.
ಪಠ್ಯ ಪರಿಷ್ಕರಣಾ ಸಮಿತಿಗೆ ಅನರ್ಹರ ನೇಮಕ ಮತ್ತು ಅದರಿಂದ ಸೃಷ್ಟಿಯಾಗಿರುವ ವಿವಾದಕ್ಕೆ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಯಾವ ಪಠ್ಯವನ್ನು ಓದಬೇಕೆಂಬ ಬಗ್ಗೆ ವಿದ್ಯಾರ್ಥಿಗಳು, ಯಾವುದನ್ನು ಬೋಧಿಸಬೇಕೆಂದು ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಇದಕ್ಕೆ ಏನು ಪರಿಹಾರ? ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಈಗಿನ ಗೊಂದಲಗಳಿಗೆ ಇರುವ ಏಕೈಕ ಪರಿಹಾರವೆಂದರೆ ನಾಡದ್ರೋಹಿ ಅಧ್ಯಕ್ಷನ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ರದ್ದುಮಾಡಿ, ನೂತನ ಪರಿಷ್ಕೃತ ಪಠ್ಯ ರಚನೆಯಾಗುವ ವರೆಗೆ ಹಳೆಯ ಪಠ್ಯವನ್ನೇ ಮುಂದುವರಿಸುವುದು. ಮುಖ್ಯಮಂತ್ರಿ ಜಿದ್ದಿಗೆ ಬೀಳದೆ ಈ ನಿರ್ಧಾರ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.


ನಾಡಗೀತೆ ಮತ್ತು ರಾಷ್ಟ್ರಕವಿ ಕುವೆಂಪು ಅವರನ್ನು ಗೇಲಿಮಾಡಿರುವ, ಸಮಾಜ ಸುಧಾರಕರಾದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಮಾತ್ರವಲ್ಲ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ಕಿತ್ತುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.ನಾನು ಕಳೆದ ಹತ್ತು ವರ್ಷಗಳಿಂದ ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯವನ್ನು ಹಾಳುಗೆಡಹುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.



Join Whatsapp