ಬಾಗೇಪಲ್ಲಿಯ ಅನುಷಾ
ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಶಂಕಾಸ್ಪದವಾಗಿ ಸಾವನ್ನಪ್ಪಿದ್ದು ,ಆಕೆಯ ಪತಿಯನ್ನು ವಶಕ್ಕೆ ತೆಗೆದುಕೊಂಡು ಚಿಕ್ಕಬಳ್ಳಾಪುರ ನಗರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಬಾಗೇಪಲ್ಲಿಯ ಅನುಷಾ(20) ಮೃತಪಟ್ಟ ನವವಿವಾಹಿತೆ. ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಕಾಲೇಜಿನಲ್ಲಿ ಅಕೆಯು ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಹೋಗಿ ಬರುತ್ತಿದ್ದ ವೇಳೆ ಬಂಡೆ ಕೆಲಸದ ಸೂಪರ್ ವೈಸರ್ ಅಭಿಲಾಶ್(25)ನ ಪರಿಚಯವಾಗಿದೆ.ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದಷ್ಟೇ ಇವರಿಬ್ಬರೂ ಮದುವೆಯಾಗಿ ಶೆಟ್ಟಿಹಳ್ಳಿ ಬಡಾವಣೆಯ ಮುನ್ಸಿಪಾಲ್ ಕಾಲೇಜ್ ಹಿಂಭಾಗದಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು.
ಇವರಿಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ ರಾತ್ರಿ ಅನುಷಾ ಜೊತೆ ಯಾವುದೋ ವಿಚಾರವಾಗಿ ಅಭಿಲಾಶ್ ಗಲಾಟೆ ಮಾಡಿದ್ದಾನೆ. ಆದರೆ ಬೆಳಗಾಗುವಷ್ಟರಲ್ಲಿ ಅನುಷಾ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ.
ವಿಷಯ ತಿಳಿದು ಅನುಷಾ ಪೋಷಕರು ಸ್ಥಳಕ್ಕೆ ಆಗಮಿಸಿದ್ದು , ತಮ್ಮ ಮಗಳನ್ನು ಅಭಿಲಾಶನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತಳ ಪೋಷಕರು ನೀಡಿದ ದೂರಿನ್ವಯ ಅಭಿಲಾಶನನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೆಲಮಂಗಲದ ಪೂಜಾ
ನೆಲಮಂಗಲ: ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ.
ಪೂಜಾ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಎರಡು ವರ್ಷದ ಹಿಂದೆ ಮಂಜುನಾಥ್ ಎಂಬವನಿಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಗಂಡನೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಹೆಂಡತಿಯೊಂದಿಗೆ ಗಂಡ ಮುಂಜುನಾಥ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ, ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕಷ್ಟ ಕೊಡುತ್ತಿದ್ದರು. ಮಂಜುನಾಥನಿಗೆ ಶಿಕ್ಷೆ ಆಗಬೇಕು ಎಂದು ಮೃತಳ ಪೋಷಕರು, ಸಂಬಂಧಿಕರು ಆಗ್ರಹಿಸಿದ್ದಾರೆ.
ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.