ನಾನೊಬ್ಬ ಪಾಪಿ, ನನ್ನ ಕಾಲಿಗೆ ಗುಂಡು ಹಾರಿಸುವ ಬದಲು ಎದೆಗೆ ಗುಂಡು ಹಾರಿಸಿದ್ದರೆ ಚೆನ್ನಾಗಿತ್ತು: ಆ್ಯಸಿಡ್ ನಾಗ

Prasthutha|

ಬೆಂಗಳೂರು: ನಾನು ದೊಡ್ಡ ತಪ್ಪು ಮಾಡಿದೆ, ಆ್ಯಸಿಡ್ ಹಾಕಬಾರದಿತ್ತು. ಕನಸು-ಮನಸಲ್ಲೂ ಯೋಚನೆ ಮಾಡದ್ದನ್ನು ಮಾಡಿದೆ. ಕ್ಷಮಿಸಿ ನಾನೊಬ್ಬ ಪಾಪಿ ಎಂದು ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ನಾಗೇಶ್ ಬಾಬು ಅಲಿಯಾಸ್ ನಾಗೇಶ್ ಪೊಲೀಸರ ಮುಂದೆ ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾನೆ.

- Advertisement -


ಯುವತಿ ಮೇಲೆ ಆ್ಯಸಿಡ್ ಎರಚಿ ಕಾಮಾಕ್ಷಿಪಾಳ್ಯ ಪೊಲೀಸರ ಬಂಧನದಲ್ಲಿರುವ ಆರೋಪಿ ಆ್ಯಸಿಡ್ ನಾಗ ವಿಚಾರಣೆ ವೇಳೆ ನನ್ನನ್ನು ಕ್ಷಮಿಸಿ ಎಂದು ಗೋಳಾಡಿದ್ದಾನೆ. ಆ್ಯಸಿಡ್ ಹಾಕುವ ಮನಸ್ಸು ನನಗಿರಲಿಲ್ಲ. ನಾನು ಪ್ರೀತಿಸಿದ ಯುವತಿ ಬೇರೆ ಯಾರಿಗೂ ಸಿಗಬಾರದು ಎಂದು ಹೀಗೆ ಮಾಡಿದೆ. ಆದರೆ ಈಗ ಆ್ಯಸಿಡ್ ಹಾಕಿ ಪ್ರತಿಕ್ಷಣ ಸತ್ತು ಬದುಕುತ್ತಿದ್ದೇನೆ. ನಾನು ಯುವತಿಯನ್ನು ಕಾಲೇಜಿನಲ್ಲಿದ್ದಾಗಲೇ ಪ್ರೀತಿಸುತ್ತಿದ್ದೆ. ಕಾಲೇಜಿನಲ್ಲೂ ಕೂಡ ಯುವತಿಯನ್ನು ಹಿಂಬಾಲಿಸುತ್ತಿದ್ದೆ. ಯಾರಾದರೂ ನನ್ನ ಯುವತಿ ಮೇಲೆ ಕಣ್ಣು ಹಾಕಿದರೆ ಎಚ್ಚರಿಕೆ ಕೊಡುತ್ತಿದ್ದೆ. ಒನ್ ಸೈಡ್ ಲವ್ ಎಂದು ಗೊತ್ತಾಗುತ್ತಿದ್ದಂತೆ ಹುಚ್ಚನಾಗಿಬಿಟ್ಟಿದ್ದೆ. ಅವಳಿಲ್ಲದೇ ಒಂದು ಸೆಕೆಂಡ್ ಕೂಡ ಇರುವುದಕ್ಕೆ ಆಗುತ್ತಿರಲಿಲ್ಲ ಎಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.


ನನ್ನನ್ನು ಆಕೆ ಇಷ್ಟ ಪಡುತ್ತಿಲ್ಲ ಎಂದ ಕೂಡಲೇ ಕುಡಿತವೇ ಜೀವನವಾಯಿತು. ನಾನು ತಪ್ಪು ಮಾಡಿದೆ. ದೇವರು ಅದಕ್ಕೆ ನಿಮ್ಮ ಕೈಯಿಂದ ಶಿಕ್ಷೆ ಕೊಡಿಸಿಬಿಟ್ಟ. ನನ್ನ ಕಾಲಿಗೆ ಗುಂಡು ಹಾರಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದೀರಾ. ನನಗೆ ಕಾಲು ಮುರಿದಿರುವುದು ಸಣ್ಣ ಶಿಕ್ಷೆಯೇ, ನನ್ನನ್ನು ಗಲ್ಲಿಗೇರಿಸುವುದೇ ಸೂಕ್ತ. ನನ್ನ ಕಾಲಿಗೆ ಗುಂಡು ಹಾರಿಸುವ ಬದಲು ನನ್ನ ಎದೆಗೆ ಗುಂಡು ಹಾರಿಸಿದ್ದರೆ ಒಳ್ಳೆಯದಾಗುತ್ತಿತ್ತು. ದಯವಿಟ್ಟು ನನಗೆ ಸರಿಯಾದ ಶಿಕ್ಷೆ ಸಿಗುವ ಹಾಗೇ ಮಾಡಿ. ಮುಂದಿನ ದಿನದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿರುತ್ತೇನೆ ಎಂದು ಹೇಳಿದ್ದಾನೆ.

- Advertisement -


ನಾನು ಆ್ಯಸಿಡ್ ಹಾಕಿರುವ ಹುಡುಗಿಗೆ ನಾನೇ ಲೈಫ್ ಕೊಡುತ್ತೇನೆ. ಆದರೆ ಆ ಯುವತಿ ಹಾಗೂ ಅವರ ಮನೆಯವರು ಒಪ್ಪಬೇಕು. ಆಕೆಯನ್ನು ಮದುವೆಯಾಗುವ ಅರ್ಹತೇನೂ ನನಗಿಲ್ಲ ಎಂದು ತಿಳಿಸಿದ್ದಾನೆ.



Join Whatsapp