ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಸರ್ಕಾರ ನಿನ್ನೆ ಪ್ರಕಟಿಸಿರುವ ಕ್ರಮ ನಮಗೆ ಪೂರ್ಣಪ್ರಮಾಣದಲ್ಲಿ ಸ್ವೀಕಾರರ್ಹವಲ್ಲ. ಹೀಗಾಗಿ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಎಲ್ಲರ ಜತೆ ಚರ್ಚೆ ಮಾಡಿ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ವಜಾಗೊಳಿಸಬೇಕು ಹಾಗೂ ಪರಿಷ್ಕೃತ ಪಠ್ಯವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಯಿಂದ ಪಾದಯಾತ್ರೆ ಮಾಡುವುದಾಗಿ ನಾನು ಆಗ್ರಹಿಸಿದ್ದೆ. ನಂತರ ವಿವಿಧ ಭಾಗಗಳಿಂದ ಸಾಹಿತಿಗಳು, ಸಾಹಿತ್ಯಾಸಕ್ತರು ಶಾಸಕಾಂಗ ಪಕ್ಷದ ಸಿದ್ದರಾಮಯ್ಯ, ಮಾಜಿ ಸಚಿವ ರಮೇಶ್ ಕುಮಾರ್, ಸಾಹಿತಿ ಪ್ರೋ ಸಿದ್ದರಾಮಯ್ಯ ಅವರು ನಾವು ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ನಿನ್ನೆ ಸರ್ಕಾರಕ್ಕೆ ನೀಡಿರುವ ವರದಿ ಮೂಲಕ ಈ ವಿಚಾರ ಸಂಪೂರ್ಣವಾಗಿ ಮುಕ್ತಾಯವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಸರ್ಕಾರ ನಿನ್ನೆ ಪ್ರಕಟಿಸಿರುವ ಕ್ರಮ ನಮಗೆ ಪೂರ್ಣಪ್ರಮಾಣದಲ್ಲಿ ಸ್ವೀಕಾರರ್ಹವಲ್ಲ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದು ಹೊಟೇಲ್ ನಲ್ಲಿ ಹೋಗಿ ಬೇಕಾದ ತಿನಿಸು ಖರೀದಿಸದಂತಲ್ಲ. ಇಲ್ಲಿ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಪಠ್ಯ ಪುಸ್ತಕದಲ್ಲಿ ಆಟವಾಡಲು ಮುಂದಾಗುವುದಾದರೆ ಅವರು ಸರ್ಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ. ಕೇವಲ 2 ತಿಂಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿ ಮಕ್ಕಳ ಅಂದರೆ ಸುಮಾರು 1 ಕೋಟಿ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಸಾಧ್ಯವೇ? ಇವರಿಗೆ ಬೇಕಾದವರನ್ನು ನೇಮಿಸಿ, ಇವರಿಗೆ ಪೂರಕವಾಗಿರುವ ಸಾಹಿತಿಗಳ ಬರಹ ಸೇರಿಸಿಕೊಂಡು, ಪ್ರಮುಖರ ಲೇಖನಗಳು ಮಹಾನ್ ವ್ಯಕ್ತಿಗಳ ಇತಿಹಾಸವನ್ನು ಕೈಬಿಡುವುದಾದರೆ ಇದು ಸಮಂಜಸವೇ? ಎಂದು ಪ್ರಶ್ನಿಸಿದರು.
ನಾನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಪಠ್ಯ ಪರಿಷ್ಕರಣಾ ಸಮಿತಿಯನ್ನು ಪ್ರಕಟಿಸಿದ್ದೆ. ಅದಕ್ಕೂ ಮುನ್ನ ಸಾಕಷ್ಟು ಚರ್ಚೆ ಮಾಡಿದ್ದೆ. ಕಾರಣ, ನಾನು ಶಿಕ್ಷಣ ಸಚಿವಾಲಯದಿಂದ ಮಾಹಿತಿ ಪಡೆದಾಗ, 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಿದ್ದರು. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮೂರು ವಿಧವಾದ ಪ್ರಜೆಗಳನ್ನು ನಿರ್ಮಾಣ ಮಾಡುತ್ತಿದ್ದು, ರಾಜ್ಯ ಮಟ್ಟ, ಸಿಬಿಎಸ್ ಸಿ ಹಾಗೂ ಐಸಿಎಸ್ ಸಿ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುತ್ತಿದ್ದು, ಐಸಿಎಸ್ ಸಿಯಲ್ಲಿರುವ ವಿಷಯಗಳು ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಬರುತ್ತಿದ್ದವು ಆಗ ರಾಜ್ಯ ಮಟ್ಟದ ಶಿಕ್ಷಣದಲ್ಲಿ ಓದಿದ, ಬಡವರು, ಆರ್ಥಿಕವಾಗಿ ಹಿಂದುಳಿದ ವರ್ಗದ ದಲಿತ ಮಕ್ಕಳಿಗೆ ಇದು ಕಷ್ಟವಾಗುತ್ತಿತ್ತು. ಇದನ್ನು ಬದಲಿಸಲು ರಾಜ್ಯ ಪಠ್ಯಕ್ರಮದಲ್ಲಿ ಐಸಿಎಸ್ ಸಿ ಹಾಗೂ ಸಿಬಿಎಸ್ ಸಿಯಲ್ಲಿನ ವಿಚಾರಗಳನ್ನು ಸೇರಿಸಲು ಪರಿಷ್ಕರಣ ಸಮಿತಿ ನೇಮಿದೆ. ಈ ಸಮಿತಿ ರಚಿಸುವಾಗ ಯಾವುದೇ ಸಿದ್ಧಾಂತದ ಪರವಾಗಿ, ಪಕ್ಷದ ಜತೆ ಗುರುತಿಸಿಕೊಳ್ಳದ ಹಾಗೂ ಕರ್ನಾಟಕ ಸಾಹಿತ್ಯದ ಬಗ್ಗೆ ತಿಳಿದಿರುವ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಿದೆ. ಮೊದಲು ನಾನು ಅವರಿಗೆ ಈ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದರೂ ಪುಸ್ತಕ ಸಮಿತಿ, ಸಾಹಿತಿಗಳು ಹಾಗೂ ಸಾರ್ವಜನಿಕರ ಜತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬಂದಿದ್ದೆ ಎಂದರು.
ಬರಗೂರು ರಾಮಚಂದ್ರಪ್ಪನವರು ಎರಡೂವರೆ ವರ್ಷಗಳ ಕಾಲ ವಿಷಯವಾರು 27 ಸಮಿತಿ ರಚಿಸಿ, ಆಯಾ ವಿಷಯಗಳ ಅತ್ಯುತ್ತಮ ಉಪಾಧ್ಯಾಯರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದು ಪರಿಷ್ಕರಣೆ ಮಾಡಿದ್ದರು. ಇನ್ನು ಸಂಘ ಸಂಸ್ಥೆಗಳು, ಸಾಹಿತಿಗಳ ಸಂಘಟನೆಗಳನ್ನು ಚರ್ಚಿಸಿ ತಾರ್ಮಾನ ಮಾಡಿದ್ದರು. ನಂತರ ಅದರಲ್ಲಿ ನ್ಯೂನ್ಯತೆ ಇದ್ದರೆ ಅದನ್ನು ಸರಿಪಡಿಸುವುದಾಗಿಯೂ ಹೇಳಿದ್ದಾರೆ. ಇದ್ದೆಲ್ಲದರ ನಂತರ ಈ ಪಠ್ಯ ಜಾರಿಗೊಳಿಸುವ ಮುನ್ನ ಶಾಸನ ಸಭೆ, ವಿಧಾನ ಪರಿಷತ್ ನಲ್ಲಿ ಚರ್ಚೆ ಆಗಿದೆ. ಅಲ್ಲಿ ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಚರ್ಚೆ ಮಾಡಿದ್ದಾರೆ. ಈ ಎರಡೂ ಸದನದಲ್ಲಿ ಒಪ್ಪಿದ ನಂತರ ಈ ಪಠ್ಯ ಜಾರಿಗೆ ತರಲಾಗಿತ್ತು. ಈ ಸರ್ಕಾರ ಈ ಪರಿಷ್ಕರಣಾ ಸಮಿತಿಯ ಅರ್ಹತೆ ಏನು? ಇವರು ಯಾರೊಂದಿಗೆ ಚರ್ಚಿಸಿ, ಯಾವೆಲ್ಲ ಅಧ್ಯಯನ ಮಾಡಿ ಯಾವೆಲ್ಲ ಬದಲಾವಣೆ ತಂದಿದ್ದಾರೆಎಂದು ಜನರಿಗೆ ಹೇಳಲಿ ಎಂದು ಸವಾಲು ಹಾಕಿದರು.
ಇವರು ಬರಹಗಾರರ ಮೇಲೆ ನೀಡಿರುವ ಹೇಳಿಕೆ ನೋಡಿದರೆ ಇವರು ಅಧ್ಯಯನ ಮಾಡಿಲ್ಲವೇ ಎಂದು ಅನಿಸುತ್ತದೆ. ಪಂಪ, ರನ್ನ ಅವರು ಬರೆದಿದ್ದು ಕೆಲವೇ ಸಾಹಿತ್ಯಗಳಾದರೂ ಅವುಗಳು ಇನ್ನು ಎರಡು ಸಾವಿರ ವರ್ಷ ಜೀವಂತವಾಗಿರುತ್ತದೆ. ಆದರೆ ಇವರು ಇಟಲಿ ಕಾಂಗ್ರೆಸ್ ಎಂದು ಕಾಮೆಂಟ್ ಮಾಡುತ್ತಾರೆ. ಇವರು ಮನುಸ್ಮೃತಿ ಬಗ್ಗೆ ಯಾಕೆ ಪ್ರಶ್ನೆ ಮಾಡುವುದಿಲ್ಲ? ನೀವು ಜಾತಿ, ಧರ್ಮ ವಿಭಾಗ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಈ ಜಾತಿ ವಿಭಾಗ ಮಾಡಿರುವುದು ಮನುಸ್ಮೃತಿ. ಇದಕ್ಕೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದ್ದು, ಶ್ರೇಣಿ ಪದ್ಧತಿ ತಂದಿದೆ. ಸಿ.ಟಿ ರವಿ, ಪ್ರತಾಪ್ ಸಿಂಹ, ಈಶ್ವರಪ್ಪನವರು ಕೃತಿ ಸಂಘ ರೂಪದರ್ಶನ, ಚಿಂತನ ಗಂಗಾ ಸರಿಯಾದ ಅಧ್ಯಯನ ಮಾಡಿಲ್ಲ. ಅವರು ಬೇಕಾದರೆ ಅವರು ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ. ಇದರಲ್ಲಿ ಒಂದು ಜಾತಿ, ಒಂದು ಧರ್ಮ, ಒಂದು ಭಾಷೆ, ಒಂದು ಬಾವುಟ ಎನ್ನುತ್ತಾರೆ. ಇಂದು ಅಮೆರಿಕದಲ್ಲಿ ಉಪರಾಷ್ಟ್ರಪತಿ ಯಾರು? ಅವರ ಮೂಲ ಯಾವುದು? ಇಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಪ್ರಶ್ನಿಸುತ್ತಾರೆ. ಒಬಾಮ ಅಮೆರಿಕದವನೇ? ಅರ್ಧ ಮುಸಲ್ಮಾನ ಹಾಗೂ ಅರ್ಧ ಕಪ್ಪು ವರ್ಣೀಯನೂ ಹೌದು. ಬ್ರಿಟೀಷ್ ಆರ್ಥಿಕ ಸಚಿವ ಯಾರು? ಸುಧಾಮೂರ್ತಿ ಅವರ ಅಳಿಯ. ಇಲ್ಲಿ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಅವರ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದು ಕಿಮ್ಮನೆ ಟೀಕಾಪ್ರಹಾರ ನಡೆಸಿದರು.
ಜಾತಿ ವ್ಯವಸ್ಥೆ ನಿರ್ಮಾಣ ಮಾಡಿದವರು ಹಿಂದೂ ಧರ್ಮದಲ್ಲಿರುವ ಮನುಸ್ಮೃತಿ. ಸರ್ಕಾರ ಮಸೀದಿ, ಮಂದಿರಗಳಿಗೆ ಅಂತಿಮ ಗಡುವು ನಿಗದಿ ಮಾಡುತ್ತಾರೆ. ಇನ್ನು 6 ತಿಂಗಳು ಸಮಯ ತೆಗೆದುಕೊಂಡು ಅವರು ಹಿಂದೂ ಸಮಾಜದಲ್ಲಿ ಸಮಾನತೆಗೆ ಹೋರಾಟ ಮಾಡಲು ದಿನಾಂಕ ಪ್ರಕಟಿಸಲಿ. ಈ ವಿಚಾರ ಆರ್ ಎಸ್ಎಸ್ ನಲ್ಲಿ ಜಾಗ ಇಲ್ಲವಲ್ಲ. ಸಮಾಜದಲ್ಲಿನ ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಬುದ್ಧ ಬಸವಣ್ಣ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಪೆರಿಯಾರ್, ನಾರಾಯಣ ಗುರುಗಳು ಪ್ರಯತ್ನಿಸಿದ್ದರು. ಬಿಜೆಪಿ ಪರವಾರದವರು ಏನು ಮಾಡಿದ್ದಾರೆ? ಕೇವಲ ಉಪದೇಶ ಮಾಡಿದರೆ ಸಾಲುವುದಿಲ್ಲ. ಒಟ್ಟಿಗೆ ಕಾಫಿ ಕುಡಿದು, ಪ್ರಯಾಣ ಮಾಡಿದರೆ ಸುಧಾರಣೆ ಅಲ್ಲ. ಅದಕ್ಕಿಂತ ಹೆಚ್ಚಿನದು ಆಗಬೇಕಿದೆ.
ಈ ಪರಿಷ್ಕರಣ ಸಮಿತಿ ವಜಾ ಮಾಡುವುದಷ್ಟೇ ಅಲ್ಲ, ಈ ಹಿಂದೆ ಇದ್ದ ಪಠ್ಯ ಜಾರಿಗೆ ತರಬೇಕು. ಹೊಸ ಸಮಿತಿ ರಚಿಸಿ, ಸದನದಲ್ಲಿ ಚರ್ಚೆ ಮಾಡಲಿ ಎಂದು ಅವರು ಆಗ್ರಹಿಸಿದರು. ಅವರು ನಾರಾಯಣ ಗುರು, ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರ ವಿಚಾರ ಕೈಬಿಟ್ಟುದ್ದು ಯಾಕೆ. ಕುವೆಂಪು ಅವರ ಬಗ್ಗೆ ಅವರು ಆಡಿರುವ ಮಾತುಗಳ ಸರಿಯೇ? ಕುವೆಂಪು ಅವರನ್ನು ಸಾಹಿತಿಗಳನ್ನು ಜಾತಿ ಆಧಾರದ ಮೇಲೆ ನೋಡುವುದು ಬೇಡ. ಈ ವ್ಯವಸ್ಥೆ ನೋಡಿದರೆ ಈ ದೇಶ ಯಾವಾಗ ಅಫ್ಘಾನಿಸ್ತಾನವಾಗುತ್ತದೆಯೋ, ಶ್ರೀಲಂಕಾ, ಪಾಕಿಸ್ತಾನವಾಗುತ್ತದೆಯೋ ಗೋತ್ತಿಲ್ಲ. ಈ ದೇಶ ಒಡೆದರೆ ಅದಕ್ಕೆ ಬಿಜೆಪಿಯೇ ಕಾರಣ. ನೀವು ಸಾಮಾಜವನ್ನು ವಿಭಜಿಸುವುದೇ ಆದರೆ ಅದು ಧರ್ಮದ ಆಧಾರದಲ್ಲೇ ಯಾಕೆ ಮಾಡುತ್ತಾರೆ?
ಕಾಂಗ್ರೆಸ್ ಒಂದು ವಿಕಾಸ. ಅಧಿಕಾರಕ್ಕೆ ಬಂದರೆ ಅದು ಯಶಸ್ಸು ಎಂದಲ್ಲ.ಈ ದೇಶದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದಕ್ಕೆ ಪ್ರಯತ್ನಿಸುವ ಪಕ್ಷ. ಬಸವಣ್ಣ, ಗಾಂಧಿ ಅವರಾರೂ ಅಧಿಕಾರದಲ್ಲಿರಲಿಲ್ಲ. ಆದರೂ ಯಶಸ್ಸು ಸಾಧಿಸಿದರು. ಅಂಬೇಡ್ಕರ್, ವಾಲ್ಮೀಕಿ, ಜಯಪ್ರಕಾಶ್ ನಾರಾಯಣ ಅವರು ಅಧಿಕಾರದಲ್ಲಿದ್ದರಿಂದ ಅವರು ಇಷ್ಟು ದೊಡ್ಡ ಸಾಧನೆ ಮಾಡಿದರಾ? ಎಂದು ಕೇಳಿದರು.
ಬಿಜೆಪಿಯವರಿಗೆ ಗಾಂಧಿ ಹಾಗೂ ಅಂಬೇಡ್ಕರ್ ಮೇಲೆ ಸಾಕಷ್ಟು ಕೋಪವಿದೆ. ಆದರೆ ರಾಜಕೀಯ ಬದುಕಿಗೆ ಅವರನ್ನು ಹೊಗಳುತ್ತಿದ್ದಾರೆ. 1927ರಲ್ಲಿ ಮೊದಲ ಬಾರಿಗೆ ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದ್ದು ಅಂಬೇಡ್ಕರ್. ಅವರು ಹಿಂದೂ ಧರ್ಮ ಬಿಟ್ಟಿದ್ದು ಯಾಕೆ ಎಂದು ಎಂದು ಬಿಜೆಪಿಯವರು ಉತ್ತರಿಸಲಿ. ಸಚಿವರು ಮುಖ್ಯಮಂತ್ರಿಗಳಿಗೆ ಕೊಟ್ಟಿರುವ ವರದಿಯನ್ನು ನಾವು ಒಪ್ಪುವುದಿಲ್ಲ. ಹಳೆಯ ಪಠ್ಯ ಮುಂದುವರಿಸಿ, ಹೊಸ ಸಮಿತಿ ರಚಿಸಿ, ಎಲ್ಲರೊಂದಿಗೆ ಚರ್ಚೆ ಮಾಡಿ ಸದನದಲ್ಲಿ ಚರ್ಚೆ ಮಾಡಲಿ ಎಂದು ಅವರು ಆಗ್ರಹಿಸಿದರು.
ಈಗ ಹಳೇ ಪುಸ್ತಕವನ್ನೇ ಮಕ್ಕಳಿಗೆನೀಡಿದರೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಇನ್ನು ಜೂನ್ ತಿಂಗಳು, ಒಂದು ವಾರದಲ್ಲಿ ಹಳೇ ಪಠ್ಯವನ್ನೇ ಮುದ್ರಿಸಿ ನೀಡಿದರೆ, ಮಕ್ಕಳಿಗೆ ಓದಲು ಇನ್ನು ಒಂದು ವರ್ಷ ಸಮಯಾವಕಾಶವಿದೆ. ನಾನು ಶಿಕ್ಷಣ ಸಚಿವನಾಗಿದ್ದು, ನಾನು ಸಚಿವನಾಗುವ ಮುನ್ನ ಆಗಸ್ಟ್ ತಿಂಗಳಲ್ಲಿ ಪುಸ್ತಕ ವಿತರಣೆ ಆಗಿರುವ ಉದಾಹರಣೆಗಳಿವೆ. ಕಲಿಕೆ ಎಂಬುದು ಗಂಭೀರ ವಿಚಾರ ಇದರಲ್ಲಿ ಆಟವಾಡುವುದು ಸರಿಯಲ್ಲ’ ಎಂದರು.
ಎನ್ ಇಪಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಇದು ಶ್ರೀಮಂತರ ಪರವಾಗಿ ತಂದಿರುವ ನೀತಿ. ಅದರಲ್ಲಿ ಮುಕ್ತ ಅವಕಾಶ ನೀಡಿದ್ದು, ಬಡವರಿಗೆ ಅವಕಾಶವೇ ಇಲ್ಲದಂತಾಗಿದೆ. ನರ್ಸರಿಯಿಂದ ದ್ವಿತೀಯ ಪಿಯುಸಿ ವರೆಗೆ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಕಡ್ಡಾಯ ಹಾಗೂ ಉಚಿತ ಶಿಕ್ಷಣ ನೀಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಕಿಮ್ಮನೆ ರತ್ನಕಾರ ಹೇಳಿದರು.