ಮಂಗಳೂರು: ಮೈಸೂರು ನಿಲ್ದಾಣದಲ್ಲಿ ಪ್ರಾರಂಭಿಸಿದ್ದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಗೆ ಪ್ರಯಾಣಿಸುವ ಯಾತ್ರಿಕರಿಂದ ದೊರಕಿದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ, ಪ್ರಯಾಣಿಕರಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಸಲುವಾಗಿ ಮತ್ತು ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸಿ ಸಮಾಜದ ಕೆಳಸ್ತರದಲ್ಲಿರುವ ವರ್ಗಕ್ಕೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ‘ವೋಕಲ್ ಫಾರ್ ಲೋಕಲ್’ ಕಾರ್ಯಕ್ರಮದಡಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು, ಚಾಮರಾಜನಗರ, ಹಾಸನ, ಮಂಗಳೂರು, ಮಡಿಕೇರಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 67 ರೈಲು ನಿಲ್ದಾಣಗಳಿಗೆ ಈ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಿದೆ.
2022-23ರ ಕೇಂದ್ರೀಯ ವಿತ್ತಪತ್ರದಲ್ಲಿ ಘೋಷಿಸಲಾದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯು ವಿಭಾಗಾದ್ಯಂತ ರೈಲು ನಿಲ್ದಾಣಗಳಲ್ಲಿ, ಸ್ಥಳೀಯ ಪ್ರದೇಶದ ಸುತ್ತಮುತ್ತಲಿನ ವಿಶೇಷ ಉತ್ಪನ್ನಗಳು ಹಾಗು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಒದಗಿಸುವ ಮೂಲಕ ಅವುಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕರಕುಶಲ ವಸ್ತುಗಳು, ಕಲಾಕೃತಿಗಳು, ಜವಳಿ ಮತ್ತು ಕೈಮಗ್ಗಗಳ ನೇಯ್ದ ಬಟ್ಟೆ, ಸಾಂಪ್ರದಾಯಿಕ ಉಡುಪುಗಳು, ಸ್ಥಳೀಯ ಕೃಷಿ ಉತ್ಪನ್ನಗಳು, ಸಂಸ್ಕರಿಸಿದ/ಅರೆ-ಸಂಸ್ಕರಿಸಿದ ಆಹಾರಗಳು, ಮಸಾಲೆಗಳು ಮತ್ತು ಅರಣ್ಯ ಉತ್ಪನ್ನಗಳು, ಶ್ರೀಗಂಧದ ಆಧಾರಿತ ಉತ್ಪನ್ನಗಳು, ಕಾಫಿ ಮತ್ತು ಏಲಕ್ಕಿಯನ್ನು ಒಳಗೊಂಡಿರುವ ಉತ್ಪನ್ನಗಳ ಶ್ರೇಣಿಯನ್ನು ನಿರ್ದಿಷ್ಟ ನಿಲ್ದಾಣಕ್ಕೆ ಸ್ಥಳೀಯ ವಿಶೇಷದ ಅನುಗುಣವಾಗಿ ಗುರುತಿಸಲಾಗಿದೆ.
ಮೈಸೂರು ವಿಭಾಗವು ಈ ಮೇಲಿನ ಉತ್ಪನ್ನಗಳೊಂದಿಗೆ ವ್ಯವಹರಿಸುವ ಏಜೆನ್ಸಿಗಳು, ಕುಶಲಕರ್ಮಿಗಳು, ನೇಕಾರರು, ಕರಕುಶಲಿಗಳು, ಸ್ವ-ಸಹಾಯ ಗುಂಪುಗಳು, ಬುಡಕಟ್ಟು ಸಹಕಾರ ಸಂಘಗಳು ಮತ್ತು ಸಮಾಜದ ಕಟ್ಟಕಡೆಯ ಹಾಗು ದುರ್ಬಲ ವರ್ಗಗಳಿಂದ ತಮ್ಮ ಉತ್ಪನ್ನಗಳನ್ನು ವಿಭಾಗದಾದ್ಯಂತದ ರೈಲ್ವೆ ನಿಲ್ದಾಣಗಳಲ್ಲಿ ಮಾರಾಟ ಮಾಡಲು ಅರ್ಜಿಗಳನ್ನು ಆಹ್ವಾನಿಸಲು ಉದ್ದೇಶಿಸಿದೆ.
ಮಾರಾಟದ ಅವಧಿಯು 15 ದಿನಗಳಾಗಿದ್ದೂ, ಪೂರ ಅವಧಿಗೆ ನಾಮಮಾತ್ರ ಶುಲ್ಕ ರೂ 1000/- (ಒಂದು ಸಾವಿರ ಮಾತ್ರ) ಆಗಿರುತ್ತದೆ. ಒಂದು ನಿರ್ದಿಷ್ಟ ನಿಲ್ದಾಣಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ, ಆದ್ಯತಾ ಪಟ್ಟಿಯ ಪ್ರಕಾರವಾಗಿ, ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು ಮತ್ತು ಆದ್ಯತೆಯ ಪಟ್ಟಿಯಲ್ಲಿರುವ ಎಲ್ಲಾ ಅರ್ಜಿದಾರರು ಮುಗಿಯುವವರೆಗೆ ಇದನ್ನು ಮುಂದುವರೆಸಲಾಗುವುದು. ಪ್ರಯಾಣಿಕರಿಗೆ ಸುಲಭವಾಗಿ ಪ್ರವೇಶ ಸಾದ್ಯವಾಗುವ ಸ್ಥಳದಲ್ಲಿ ತಾತ್ಕಾಲಿಕ ಕ್ರಿಯಾತ್ಮಕ ಅಂಗಡಿಯನ್ನು ಭಾಗವಹಿಸುವವರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಭಾಗವಹಿಸುವವರು ಉತ್ಪನ್ನಗಳನ್ನು ನಿಲ್ದಾಣದಲ್ಲಿ ಮತ್ತು ಪ್ಲಾಟ್ ಫಾರ್ಮ್‌ಗಳಲ್ಲಿ ಮಾರಾಟ ಮಾಡಬಹುದು. ಕುಶಲಕರ್ಮಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಕೋರಿದ್ದಾರೆ.
ಪ್ರತಿಯೊಂದು ನಿಲ್ದಾಣಕ್ಕೆ ಗುರುತಿಸಲಾದ ಉತ್ಪನ್ನಗಳ ಪಟ್ಟಿಯು http://www.swr.indianrailways.gov.in/ ನಲ್ಲಿ ಲಭ್ಯವಿದೆ. ಅರ್ಜಿಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುವುದು ಮತ್ತು ದಿನಾಂಕವನ್ನು ಸೂಚಿಸಲಾಗುವುದು. ಆಸಕ್ತರು ಮೈಸೂರಿನಲ್ಲಿ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಭೇಟಿ ಮಾಡಬಹುದು ಅಥವಾ 8884303801, 7977509065 ಮತ್ತು 9731159568 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.