ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಏಕಾಏಕಿ ನೋಟ್ ಬ್ಯಾನ್ ರೀತಿಯಲ್ಲಿ ಶಿರವಸ್ತ್ರವನ್ನು ನಿಷೇಧಿಸಲಾಯಿತು ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿಜಾಬ್ ಕಾರಣದಿಂದ ತರಗತಿಗೆ ಪ್ರವೇಶ ನಿರಾಕರಿಸಲ್ಪಟ್ಟ ವಿದ್ಯಾರ್ಥಿನಿ ಗೌಸಿಯಾ, ಮೇ 16 ರ ರಾತ್ರಿ ಏಕಾಏಕಿ ವಾಟ್ಸಾಪ್ ಮೂಲಕ ಹಿಜಾಬ್ ನಿಷೇಧದ ಕುರಿತು ನಮಗೆ ತಿಳಿಸಲಾಗಿದೆ. ಮರುದಿನ ಪ್ರಾಂಶುಪಾಲರ ಬಳಿ ಹೋದಾಗ ಅಧಿಕೃತ ಆದೇಶ ಪತ್ರ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಹೈಕೋರ್ಟ್ ಆದೇಶದನ್ವಯ ಶಿರವಸ್ತ್ರ ನಿರ್ಬಂಧಿಸುವುದಾಗಿ ಹೇಳಿದ್ದರು, ಆರಂಭದಲ್ಲಿ ಕೆಲವು ಉಪನ್ಯಾಸಕರು ತರಗತಿಗೆ ಅವಕಾಶ ನೀಡಿದ್ದರು. ನಂತರ ಎಲ್ಲಾ ಉಪನ್ಯಾಸಕರಿಗೂ ತರಗತಿಗೆ ಪ್ರವೇಶ ನೀಡದಂತೆ ಪ್ರಾಂಶುಪಾಲರು ಸೂಚನೆ ನೀಡಿದ್ದರು. ಎಬಿವಿಪಿ ಒತ್ತಡದಿಂದ ಕ್ಯಾಂಪಸ್ ಪ್ರವೇಶಕ್ಕೂ ಅವಕಾಶ ನಿರಾಕರಿಸಲಾಯಿತು ಎಂದು ಆರೋಪಿಸಿದರು.
ಪ್ರಾಂಶುಪಾಲರು ವಾಚ್ ಮೆನ್ ಗಳನ್ನು ಛೂ ಬಿಟ್ಟು ನಮ್ಮನ್ನು ಹೊರ ಹೋಗುವಂತೆ ಮಾಡಿದ್ದಾರೆ. ಡಿಸಿಗೆ ಮನವಿ ನೀಡಿದರೂ ಯಾವುದೇ ಪರಿಹಾರವಾಗಿಲ್ಲ. ಗ್ರಂಥಾಲಯಕ್ಕೂ ಪ್ರವೇಶ ನಿರಾಕರಿಸಲಾಯಿತು. ತರಗತಿ ಹೊರಗಡೆ ಕೂತು ಪಾಠ ಕೇಳಲು ಕೂಡ ನಮಗೆ ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿ ಮುಂಭಾಗ ನಡೆದಿದ್ದ ಎಬಿವಿಪಿ ಪ್ರತಿಭಟನೆಯಲ್ಲಿ ಹೊರಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೇ ಪ್ರಾಂಶುಪಾಲರು ನಮ್ಮನ್ನು ತರಗತಿಯಿಂದ ಹೊರಗಿಟ್ಟದ್ದನ್ನು ಪೋಷಕರಿಗೆ ತಿಳಿಸಿರಲಿಲ್ಲ. ಮಾಧ್ಯಮಗಳ ಮೂಲಕ ಪೋಷಕರಿಗೆ ಮಾಹಿತಿ ತಿಳಿಯಿತು ಎಂದು ಹೇಳಿದರು.
ಈ ಬಗ್ಗೆ ಪೋಷಕರು ಪ್ರಾಂಶುಪಾಲರಿಗೆ ಮನವಿ ನೀಡಿದ್ದಾರೆ. ಕಾಲೇಜಿನ ನಿಯಮಾವಳಿ ಪ್ರಕಾರ ಸಮವಸ್ತ್ರ ಜೊತೆ ಶಿರವಸ್ತ್ರಕ್ಕೆ ಅವಕಾಶವಿತ್ತು. ಅದೇ ವಸ್ತ್ರ ಸಂಹಿತೆ ಕನಿಷ್ಠ ಈ ವರ್ಷಕ್ಕಾದರೂ ಅವಕಾಶ ಇರಲಿ, ಇದೇ ನಮ್ಮ ಬೇಡಿಕೆ ಎಂದು ವಿದ್ಯಾರ್ಥಿನಿ ಗೌಸಿಯಾ ಹೇಳಿದರು.
ಎರಡು ದಿನಗಳ ಗಡುವು:
ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಝ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿ ಸಂಚಾಲಕ ಅಶಾಮ್, ವಿದ್ಯಾರ್ಥಿನಿಯರಾದ ಶಝ್ಮಾ, ಮಾಶಿತಾ ಉಪಸ್ಥಿತರಿದ್ದರು.