ಮಸ್ಜಿದ್ ಗಳ ಮೇಲೆ ಹಕ್ಕುಸ್ಥಾಪಿಸುವ ಹಿಂದುತ್ವ ಪಿತೂರಿ ವಿಫಲಗೊಳಿಸಲು ನ್ಯಾಯಾಂಗ ಕೂಡಲೇ ಮಧ್ಯ ಪ್ರವೇಶಿಸಲಿ: ಪಾಪ್ಯಲರ್ ಫ್ರಂಟ್

Prasthutha|

ಬೆಂಗಳೂರು: ಮುಸ್ಲಿಮರ ಮಸ್ಜಿದ್ ಗಳನ್ನು ವಿವಾದಕ್ಕೆ ಗುರಿಪಡಿಸಿ ಅದರ ಮೇಲೆ ಹಕ್ಕುಸ್ಥಾಪಿಸುವ ಹಿಂದುತ್ವ ಪಿತೂರಿಯನ್ನು ವಿಫಲಗೊಳಿಸಲು ನ್ಯಾಯಾಂಗವು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಆಗ್ರಹಿಸಿದ್ದಾರೆ.

- Advertisement -


ಗುಲ್ಬರ್ಗಾದ ಆಲಂದ್ ನ ಲಾಡ್ಲೇ ಮಶಾಯಿಕ್ ದರ್ಗಾ, ಗದಗದ ಜಾಮಿಯಾ ಮಸ್ಜಿದ್, ಶ್ರೀರಂಗ ಪಟ್ಟಣದ ಜಾಮಿಯಾ ಮಸ್ಜಿದ್, ಇದೀಗ ಮಂಗಳೂರಿನ ಮಳಲಿ ಮಸ್ಜಿದ್ ಮೊದಲಾದ ಐತಿಹಾಸಿಕ ಮಸ್ಜಿದ್-ದರ್ಗಾಗಳನ್ನು ವಿವಾದಕ್ಕೆ ಗುರಿಪಡಿಸಿಕೊಂಡು ಆರೆಸ್ಸೆಸ್ ಪರಿವಾರವು ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ದೇಶದ ಎಲ್ಲಾ ಆರಾಧನಾ ಸ್ಥಳಗಳನ್ನು 1947ರ ಆಗಸ್ಟ್ 15ರ ವರೆಗಿನ ಅದರ ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳಬೇಕು ಮತ್ತು ಅದರ ಧಾರ್ಮಿಕ ಸ್ವರೂಪಕ್ಕೆ ಬದಲಾವಣೆ ತರುವ ಯಾವುದೇ ಕೃತ್ಯಗಳು ಅಪರಾಧ ಮತ್ತು ಶಿಕ್ಷಾರ್ಹ ಎಂದು ಆರಾಧಾನಾಲಯಗಳ ಕಾಯ್ದೆ – 1991ರಲ್ಲಿ ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಈ ಐತಿಹಾಸಿಕ ಮಸ್ಜಿದ್ ಗಳಿಗೆ ಸಂಬಂಧಿಸಿ ಸೂಕ್ತ ಸಾಕ್ಷ್ಯಾಧಾರಗಳಿದ್ದರೂ ಆರೆಸ್ಸೆಸ್ ಪರಿವಾರವು ಈ ಕಾನೂನನ್ನು ನಗಣ್ಯವಾಗಿಸುತ್ತಿದೆ.

ಬಹುಸಂಖ್ಯಾತ ಹಿಂದು ಸಮಾಜವು ಈ ಷಡ್ಯಂತ್ರಗಳಿಗೆ ಕಿವಿಗೊಡದೇ ಇದ್ದಾಗ ಜ್ಯೋತಿಷ್ಯದ ಮೂಲಕ ಅದಕ್ಕೆ ಭಾವನಾತ್ಮಕ ಸ್ಪರ್ಷ ನೀಡಲಾಗುತ್ತಿದ್ದು, ಇದು ಈ ನೆಲದ ಕಾನೂನಿನ ಅಣಕವಾಗಿದೆ. ಮಾತ್ರವಲ್ಲ, ಕಾನೂನಿಗೆ ಒಡ್ಡುತ್ತಿರುವ ಬಹಿರಂಗ ಬೆದರಿಕೆಯಾಗಿದೆ. ದಾಖಲೆ, ವಾಸ್ತವಾಂಶಗಳ ಆಧಾರದಲ್ಲಿ ಕ್ರಮ ಕೈಗೊಂಡು ವಿವಾದಗಳನ್ನು ಬೇರಿನಿಂದಲೇ ಕಿತ್ತೊಗೆಯಬೇಕಾಗಿದ್ದ ಜಿಲ್ಲಾಡಳಿತಗಳು ರಾಜಕೀಯ ಪ್ರಭಾವಕ್ಕೊಳಗಾಗಿ ಪಕ್ಷಪಾತದೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -


ಆರಾಧಾನಾಲಯಗಳ ಕಾಯ್ದೆ – 1991ರ ಪ್ರಕಾರ ಆರಾಧಾನಾಲಯಗಳಿಗೆ ಭದ್ರತೆ ಕಲ್ಪಿಸುವುದು ಆಡಳಿತ ಸರಕಾರ ಮತ್ತು ಪೊಲೀಸ್ ಇಲಾಖೆಯ ಮಹತ್ವದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಅವು ತಕ್ಷಣ ಕಾರ್ಯಪ್ರವೃತ್ತವಾಗಬೇಕಾಗಿದೆ. ಸಾಂವಿಧಾನಿಕ ಮೌಲ್ಯಗಳನ್ನು ಮತ್ತು ನ್ಯಾಯಾಂಗದ ಘನತೆಯನ್ನು ಕುಗ್ಗಿಸುವ ಇಂತಹ ಅಪಾಯಕಾರಿ ಪ್ರವೃತ್ತಿಯನ್ನು ಪ್ರತಿರೋಧಿಸಲು ನಾಗರಿಕ ಸಮುದಾಯ ಮುಂದಾಗಬೇಕಾಗಿದೆ. ಹಾಗೆಯೇ, ರಾಜಕೀಯ ಲಾಭಕ್ಕಾಗಿ ಮಸ್ಜಿದ್-ದರ್ಗಾಗಳ ಬಗ್ಗೆ ವಿವಾದ ಸೃಷ್ಟಿಸಿ ನಾಡಿನ ಸಾಮರಸ್ಯ, ಸಹಬಾಳ್ವೆಯನ್ನು ಕೆಡಿಸುವ ಶಾಂತಿ ಭಂಜಕರ ಪಿತೂರಿಯ ವಿರುದ್ಧ ಬೃಹತ್ ಜನಾಂದೋಲನ ರೂಪಿಸಿ ಜನಜಾಗೃತಿ ಮೂಡಿಸುವುದಾಗಿ ನಾಸಿರ್ ಪಾಶ ಹೇಳಿದ್ದಾರೆ.



Join Whatsapp