ಬ್ಯಾಂಕ್ ಖಾತೆ ಮುಟ್ಟುಗೋಲು | ಪಿಎಫ್ಐ ವಿರುದ್ಧ ನಡೆಯುತ್ತಿರುವ ದಮನಕಾರಿ ಕ್ರಮಗಳ ಮುಂದುವರಿದ ಭಾಗ: ಅನೀಸ್ ಅಹ್ಮದ್

Prasthutha|

ಬೆಂಗಳೂರು: ಪಿಎಫ್ಐ ಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಈ.ಡಿ) ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದು ಖಂಡನೀಯ. ಈ.ಡಿ.ಯ ಈ ಇತ್ತೀಚಿನ ಕ್ರಮವು ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ವಿರುದ್ಧ ನಡೆಯುತ್ತಿರುವ ದಮನಕಾರಿ ಕ್ರಮಗಳ ಮುಂದುವರಿದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.

- Advertisement -


ಬೆಂಗಳೂರಿನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನಪರ ಚಳವಳಿಗಳು, ಎನ್ ಜಿಒಗಳು, ಮಾನವ ಹಕ್ಕುಗಳ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ಪಕ್ಷವನ್ನು ಟೀಕಿಸುವ ದೇಶದ ಯಾವುದೆ ಪ್ರಜಾಸತ್ತಾತ್ಮಕ ಧ್ವನಿಗಳನ್ನು ದಮನಿಸುವ ಮೂಲಕ ಏಜೆನ್ಸಿಯು ರಾಜಕೀಯ ನಾಯಕರ ದಾಳವಾಗಿ ವರ್ತಿಸುತ್ತಿದೆ ಎಂದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ ಎಂದರು.


ಪಾಪ್ಯುಲರ್ ಫ್ರಂಟ್ ನಂತಹ ರಾಷ್ಟ್ರಮಟ್ಟದ ಸಾಮಾಜಿಕ ಆಂದೋಲನದ ಕಾರ್ಯನಿರ್ವಹಣೆಗೆ 13 ವರ್ಷಗಳ ಅವಧಿಗೆ ಠೇವಣಿ ಇಡುವುದು ಸಾಮಾನ್ಯ ಸಂಗತಿ. ಈ.ಡಿ ಉಲ್ಲೇಖಿಸಿದಂತೆ ಇದು ಅಸಮಾನ್ಯ ಸಂಗತಿಯೇನೂ ಅಲ್ಲ. ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ನಿರ್ವಹಣೆಗೆ ಸಾರ್ವಜನಿಕರಿಂದ ನಿಧಿ ಸಂಗ್ರಹಣಾ ಅಭಿಯಾನದ ವೇಳೆ ಸಂಗ್ರಹಿಸಿದ ಠೇವಣಿಗಳನ್ನು ಈ ಮೊತ್ತವು ಒಳಗೊಂಡಿದೆ ಎಂಬುದನ್ನು ಗಮನಿಸಬೇಕು ಎಂದು ಅನೀಸ್ ಅಹ್ಮದ್ ಹೇಳಿದರು.

- Advertisement -


ಈ.ಡಿ. ಅಧಿಕಾರಿಗಳು ಹೇಳಿರುವ ಅಂಕಿ ಅಂಶಗಳು ಆಶ್ಚರ್ಯಕರವಾಗಿಲ್ಲ ಮತ್ತು ಈ.ಡಿ.ಯಂತಹ ಏಜೆಸ್ಸಿಯಿಂದ ಯಾವುದೆ ದೊಡ್ಡ ತನಿಖೆಯ ಅಗತ್ಯವಿಲ್ಲ. ನಾವು ಈಗಾಗಲೆ ಸಂಗ್ರಹಿಸಿದ ಪ್ರತಿ ಪೈಸೆಯ ಲೆಕ್ಕವನ್ನೂ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದೇವೆ. ಇದು ಅಂಕಿ ಅಂಶಗಳನ್ನು ವೈಭವೀಕರಿಸಿರುವುದರ ಹೊರತಾಗಿ ಮತ್ತೇನೂ ಅಲ್ಲ ಎಂದು ಸಾಬೀತುಪಡಿಸುತ್ತದೆ ಎಂದು ಅವರು ತಿಳಿಸಿದರು.


2020ರಲ್ಲಿ ಅನೇಕ ಮಾಧ್ಯಮಗಳು ಪಾಪ್ಯುಲರ್ ಫ್ರಂಟ್ 120 ಕೋಟಿ ಸಂಗ್ರಹಿಸಿದೆ ಎಂದು ವರದಿ ಮಾಡಿದ್ದವು. ಪ್ರಸ್ತುತ 60 ಕೋಟಿಯ ಹೇಳಿಕೆಯು ಹಿಂದಿನ ಸುಳ್ಳು ಪ್ರತಿಪಾದನೆಯನ್ನು ನಿರಾಕರಿಸುತ್ತದೆ ಮತ್ತು ಈ ಏಜೆನ್ಸಿಗಳು ನಮ್ಮಂತಹ ಸಂಸ್ಥೆಗಳನ್ನು ಗುರಿಯಾಗಿಸಲು ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ನೀಡುತ್ತವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅನೀಸ್ ಅಹ್ಮದ್ ಹೇಳಿದರು.


ಅಮ್ನೆಸ್ಟಿ ಇಂಟರ್ ನ್ಯಾಷನಲ್ ಮತ್ತು ಗ್ರೀನ್ ಪೀಸ್ ನಂತಹ ವಿಶ್ವವಿಖ್ಯಾತ ಎನ್ ಜಿಒಗಳ ಬ್ಯಾಂಕ್ ಖಾತೆಗಳನ್ನು ಇದೇ ರೀತಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಎಲ್ಲ ಪಕ್ಷಗಳ ಭ್ರಷ್ಟ ರಾಜಕಾರಣಿಗಳು, ತನಿಖೆಯ ರೂಪದಲ್ಲಿ ನಡೆಯುವ ಈ.ಡಿ.ಯ ಪ್ರತಿಕಾರಕ್ಕೆ ಹೆದರಿ ತಮ್ಮ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸೇರುತ್ತಿರುವ ಸಂಗತಿ ಈಗಾಗಲೆ ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ ಎಂದು ಅವರು ಟೀಕಿಸಿದರು.


ಬಿಜೆಪಿ ನಾಯಕರ ಭ್ರಷ್ಟಾಚಾರ ಮತ್ತು ಕಪ್ಪುಹಣದ ವ್ಯವಹಾರಗಳು ನೂರಾರು ಕೋಟಿ ರೂ.ಗಳಷ್ಟಿದ್ದರೂ ಈ.ಡಿ.ಗೆ ಇದೊಂದು ಕಾಳಜಿಯ ವಿಷಯವಲ್ಲ. ವಿರೋಧ ಪಕ್ಷದವರನ್ನು ಗುರಿಯಾಗಿಸಲು ಮತ್ತು ಮೌನಗೊಳಿಸಲು ಬಿಜೆಪಿ ಯಾವಾಗಲೂ ಈ.ಡಿ. ಮತ್ತು ಇತರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ರೀತಿಯನ್ನು ಗಮನಿಸಿದರೆ, ಪಾಪ್ಯುಲರ್ ಫ್ರಂಟ್ ವಿರುದ್ಧದ ಈ ಕ್ರಮವು ಅಚ್ಚರಿ ಮೂಡಿಸುತ್ತಿಲ್ಲ ಎಂದು ಅನೀಸ್ ಅಹ್ಮದ್ ತಿಳಿಸಿದರು.


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯದರ್ಶಿ ಮುಹಮ್ಮದ್ ಸಾಕಿಫ್ ಮಾತನಾಡಿ, ಪಾಪ್ಯುಲರ್ ಫ್ರಂಟ್ ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ಅದು ತಳ ವರ್ಗದ ಜನಸಾಮಾನ್ಯರಿಂದ ರೂಪುಗೊಂಡಿದೆ. ಇದು ತಮ್ಮ ದೇಣಿಗೆಗಳ ಮೂಲಕ ಸಂಘಟನೆಗೆ ಸಹಾಯ ಮಾಡುವ ದೇಶಾದ್ಯಂತ ಲಕ್ಷಾಂತರ ಜನರ ವಿಶ್ವಾಸವನ್ನು ಗೆದ್ದಿದೆ ಎಂದು ಹೇಳಿದರು.


ಇದೇ ಕಾರಣದಿಂದಾಗಿ, ಯಾವುದೆ ಸಣ್ಣ ಮತ್ತು ದೊಡ್ಡಮಟ್ಟದ ಹಣಕಾಸು ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡಬೇಕೆಂಬುದು ಸಂಸ್ಥೆ ತನ್ನ ಪ್ರಾರಂಭದಿಂದಲೂ ಅನುಸರಿಸಿಕೊಂಡು ಬಂದ ನೀತಿಯಾಗಿದೆ. ಸಂಘಪರಿವಾರದ ವಿಭಜನಕಾರಿ ರಾಜಕಾರಣದ ವಿರುದ್ಧ ಪಾಪ್ಯುಲರ್ ಫ್ರಂಟ್ ತಾಳಿದ ರಾಜಿರಹಿತ ನಿಲುವು ಸಂಘಟನೆಯು ಏಜೆನ್ಸಿಯ ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ಗುರಿಯಾಗಲು ಏಕೈಕ ಕಾರಣ ಎಂದು ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಅವರು ತಿಳಿಸಿದರು.


ಸಂಘಟನೆಯು ತನ್ನ ದೃಢವಾದ ನಿಲುವಿನೊಂದಿಗೆ ಮುಂದುವರಿಯಲಿದೆ ಮತ್ತು ಆರೆಸ್ಸೆಸ್ನ ದುಷ್ಟ ಯೋಜನೆಗಳನ್ನು ವಿರೋಧಿಸಲಿದೆ. ಈ ಕ್ರಮಗಳು ನಮ್ಮನ್ನು ಬೆದರಿಸಲಾರವು ಮತ್ತು ಈ ಅಡೆತಡೆಗಳನ್ನು ಎದುರಿಸಲು ನಾವು ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಆಯ್ಕೆಗಳನ್ನು ಅನುಸರಿಸಲಿದ್ದೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಈ ಅಪ್ರಜಾಸತ್ತಾತ್ಮಕ ನಡೆ ಮತ್ತು ಅಧಿಕಾರದ ದುರ್ಬಳಕೆಯನ್ನು ಖಂಡಿಸಲು ಮುಂದಾಗಬೇಕೆಂದು ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧರಾಗಿರುವ ದೇಶದ ಜನತೆಗೆ ಪಾಪ್ಯುಲರ್ ಫ್ರಂಟ್ ಕರೆ ನೀಡುತ್ತದೆ ಎಂದು ಮುಹಮ್ಮದ್ ಸಾಕಿಫ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಉಪಸ್ಥಿತರಿದ್ದರು.



Join Whatsapp