ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿ ವರ್ಷ ಎರಡು ಕಳೆದರೂ, ಕ್ರಿಕೆಟ್ ಜಗತ್ತಿನಲ್ಲಿ ಎಂಎಸ್ ಧೋನಿ ವರ್ಚಸ್ಸನ್ನೂ ಮೊದಲಿನಂತೆಯೇ ಉಳಿಸಿಕೊಂಡಿದ್ದಾರೆ. ಮೈದಾನದಲ್ಲಿ ಸೂಪರ್ ಕೂಲ್ ಆಗಿರುವ ಎಂಎಸ್ಡಿ, ವೈಯಕ್ತಿಕ ಜೀವನದಲ್ಲೂ ಜಂಟಲ್ಮ್ಯಾನ್ ಆಗಿದ್ದು, ಬಹಳ ದೊಡ್ಡ ಸಂಖ್ಯೆಯ ಹಿಂಬಾಲಕರನ್ನೂ ಹೊಂದಿದ್ದಾರೆ.
ಇದೀಗ ʻವಿಶೇಷ ಅಭಿಮಾನಿʼಯೊಬ್ಬರನ್ನು ಧೋನಿ ಭೇಟಿಯಾದ ವೀಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಚೆನ್ನೈಗೆ ತೆರಳಲು ರಾಂಚಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಟೀಮ್ ಇಂಡಿಯಾ ಮಾಜಿ ನಾಯಕನ ಬಳಿ ವಿಶೇಷ ಚೇತನ ಬಾಲಕಿಯೊಬ್ಬರು ಫೋಟೋಗಾಗಿ ಮನವಿ ಮಾಡಿದ್ದರು. ಲಾವಣ್ಯ ಪಿಲಾನಿಯಾ ಎಂಬ ತಮ್ಮ ಅಪ್ಪಟ ಅಭಿಮಾನಿಯ ಜೊತೆ ಕುಳಿತು ಧೋನಿ, ಕೆಲಕಾಲ ಮಾತುಕತೆ ನಡೆಸಿದರು. ನೆಚ್ಚಿನ ದಿಗ್ಗಜ ಕ್ರಿಕೆಟಿಗನ ಭೇಟಿಯಿಂದ ಭಾವುಕಳಾದ ಪಿಲಾನಿಯಾ, ಕಣ್ಣೀರಾದರು. ಈ ವೇಳೆ ಬಾಲಿಕಿಯ ಕೈ ಹಿಡಿದ ಧೋನಿ ʻಅಳಬಾರದುʼ ಎಂದು ಧೈರ್ಯ ತುಂಬಿದರು. ಲಾವಣ್ಯ ಬಿಡಿಸಿದ ಚಿತ್ರವನ್ನು ಸ್ವೀಕರಿಸಿದ ಧೋನಿ, ಇದನ್ನು ತಮ್ಮ ಮನೆಯಲ್ಲಿರಿಸುವುದಾಗಿ ಹೇಳಿದರು.
ಅಚ್ಚುಮೆಚ್ಚಿನ ಆಟಗಾರನನ್ನು ಭೇಟಿ ಮಾಡಿದ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಲಾವಣ್ಯ, “ಧೋನಿ ಅವರನ್ನು ಭೇಟಿಯಾದ ಸಂದರ್ಭವನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಅವರ ಸಿಹಿಯಾದ ಮಾತು, ಮೃದು ಸ್ವಭಾವ ಮತ್ತು ತಾಳ್ಮೆಯ ವರ್ತನೆ ಎಲ್ಲರಿಗೂ ಮಾದರಿಯಾಗಿದೆ. ಕೈ ಕುಲುಕಿದ ಬಳಿಕ ನನ್ನ ಹೆಸರಿನ ಅಕ್ಷರಗಳನ್ನು ಕೇಳಿದ ಕ್ಷಣ ನನ್ನ ಜೀವನದ ಅಮೂಲ್ಯ ನಿಮಿಷವಾಗಿದೆ. ಆ ಬಳಿಕ ಅವರು ‘ರೋನಾ ನಹಿ’ (ಅಳಬೇಡ) ಎಂದು ಹೇಳಿ ನನ್ನ ಕಣ್ಣೀರು ಒರೆಸಿದರು. ಇದನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ” ಎಂದು ಲಾವಣ್ಯ ಬರೆದುಕೊಂಡಿದ್ದಾರೆ.
“ನಾನು ಬಿಡಿಸಿದ ರೇಖಾಚಿತ್ರವನ್ನು ಪಡೆದ ಧೋನಿ ಧನ್ಯವಾದ ತಿಳಿಸಿದ್ದು, ‘ಮೇ ಲೇ ಜಾವುಂಗಾ‘ ಎಂದು ಹೇಳಿದರು. ಧೋನಿ ಜೊತೆ ಕಳೆದ ಕ್ಷಣಗಳು, ಆಡಿದ ಮಾತುಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ. ಧೋನಿಯವರು ಅಮೂಲ್ಯ ಸಮಯವನ್ನು ನನಗೆ ನೀಡಿದರು. ನಾನು ಅವರಿಗೆ ‘ಆಪ್ ಬಹುತ್ ಅಚ್ಛೇ ಹೋ’ ಎಂದು ಹೇಳಿದಾಗ ಅವರ ಪ್ರತಿಕ್ರಿಯೆ ಅಮೂಲ್ಯವಾಗಿತ್ತು. 31 ಮೇ, 2022 ನನಗೆ ಎಂದೆಂದಿಗೂ ವಿಶೇಷವಾಗಿರುತ್ತದೆ” ಎಂದು ಲಾವಣ್ಯ ಪಿಲಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.