ಶಿವಮೊಗ್ಗ: ಚಕ್ರತೀರ್ಥ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ; ವಿವಿಧ ಸಂಘಟನೆಗಳ ಪ್ರತಿಭಟನೆ

Prasthutha|

ಸಾಗರ: ನಾಡಗೀತೆ ಹಾಗೂ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಎಸಗಿರುವ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರಮುಖರು ಜನಮನ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

- Advertisement -

ಈ ವೇಳೆ ಮಾತನಾಡಿದ ಲೇಖಕ ವಿಲಿಯಂ, ‘ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ನಾಡಗೀತೆ ಹಾಗೂ ಕುವೆಂಪು  ಬಗ್ಗೆ ಅಗೌರವದಿಂದ ಲಘುವಾಗಿ ಮಾತನಾಡಿರುವುದು ವಿಷಾದನೀಯ ವಿಚಾರ. ಇದು ಸಂಸ್ಕೃತಿಯೇ ಇಲ್ಲದಂತಹ ವ್ಯಕ್ತಿಯೊಬ್ಬರಿಗೆ ಸರ್ಕಾರ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸ್ಥಾನ ಕೊಟ್ಟಿರುವುದರ ಪರಿಣಾಮವಾಗಿದೆ’ ಎಂದು ದೂರಿದರು.

‘ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿದ ಕವಿ ಕುವೆಂಪು ಅವರ ಬಗ್ಗೆ ರೋಹಿತ್ ಚಕ್ರತೀರ್ಥ ಕೇವಲವಾಗಿ ಮಾತನಾಡಿರುವುದು ನಾಡದ್ರೋಹಕ್ಕೆ ಸಮನಾದ ಕೃತ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾಕುಮಾರಿ ಟೀಕಿಸಿದರು.

- Advertisement -

ರಂಗಕರ್ಮಿ ಸಂತೋಷ್ ಸದ್ಗುರು ಮಾತನಾಡಿ, ‘ಕುವೆಂಪು ಕೇವಲ ಸಾಹಿತಿಯಷ್ಟೇ ಅಲ್ಲ. ತಮ್ಮ ವೈಚಾರಿಕ ಬರಹಗಳ ಮೂಲಕ   ನಾಡಿನ ಸಾಕ್ಷಿ ಪ್ರಜ್ಞೆಯಂತೆ ಇರುವ  ಅಂತಹ ವ್ಯಕ್ತಿಯನ್ನು ಲೇವಡಿ ಮಾಡುವುದು ವಕ್ರ ಮನಸ್ಸಿನ ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಸರ್ಕಾರ ಕೂಡಲೇ ಚಕ್ರತೀರ್ಥ ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜನಮನ ಸಂಘಟನೆಯ ಡಿ. ದಿನೇಶ್, ವಿವಿಧ ಸಂಘಟನೆಗಳ ಪ್ರಮುಖರಾದ ಸಿರಿವಂತೆ ಚಂದ್ರಶೇಖರ್, ಗುಂಡಪ್ಪ ಗೌಡ, ಮೋಹನಮೂರ್ತಿ, ನಾಗೇಂದ್ರ ಕುಮಟ, ಆರ್ಥರ್ ಗೋಮ್ಸ್, ವಿಲ್ಸನ್ ಗೋಮ್ಸ್, ಏಸು ಪ್ರಕಾಶ್, ವಿಜಯಕುಮಾರ್, ಗಣಾಧೀಶ, ಭೀಮನೇರಿ ಆನಂದ್, ಪರಮೇಶ್ವರ ದೂಗೂರು, ಶಿವಾನಂದ ಕುಗ್ವೆ, ಭಾಗೀರಥಿ, ಎನ್.ಡಿ. ವಸಂತಕುಮಾರ್, ಮಹಾಬಲ ಕೌತಿ, ಸಿದ್ದಪ್ಪ ಭಾಗವಹಿಸಿದ್ದರು.



Join Whatsapp