ಬೆಂಗಳೂರು: ಕರ್ನಾಟಕ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಸ್ವೀಕೃತವಾಗಿರುವ ಭಾರತೀಯ ಜನತಾ ಪಕ್ಷದ ಮೂವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇಬ್ಬರು ಹಾಗೂ ಜಾತ್ಯತೀತ ಜನತಾದಳದ ಓರ್ವ ಅಭ್ಯರ್ಥಿ ನಾಮಪತ್ರಗಳೂ ಒಳಗೊಂಡಂತೆ ಎಲ್ಲಾ ಆರು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಹಾಗೂ ಅಂಗೀಕೃತವಾಗಿವೆ ಎಂದು ಚುನಾವಣಾಧಿಕಾರಿಗಳೂ ಆದ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ತಿಳಿಸಿದ್ದಾರೆ.
ಜೂನ್ 10 ರಂದು ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಡಿ.ಕುಪೇಂದ್ರ ರೆಡ್ಡಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್ ರಮೇಶ್, ಮನ್ಸೂರ್ ಖಾನ್ ಅವರು ನಾಮಪತ್ರ ಸಲ್ಲಿಸಿದ್ದರು.