ಪೊಲೀಸರು ಎನ್‌ಕೌಂಟರ್‌ ಮಾಡಬಹುದೆಂದು ದೆಹಲಿ ಹೈಕೋರ್ಟ್ ಮೊರೆ ಹೋದ ಮೂಸೆ ವಾಲಾ ಹತ್ಯೆ ಆರೋಪಿ ಲಾರೆನ್ಸ್ ಬಿಷ್ಣೋಯ್

Prasthutha|

ಹರ್ಯಾಣ: ಪಂಜಾಬ್‌ ಪೊಲೀಸರಿಂದ ಎನ್‌ಕೌಂಟರ್‌ಗೆ ತುತ್ತಾಗುತ್ತೇನೆ ಎಂಬ ಭೀತಿಯಲ್ಲಿರುವ ಗಾಯಕ, ಕಾಂಗ್ರೆಸ್‌ ನಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಲಾರೆನ್ಸ್‌ ಬಿಷ್ಣೋಯ್‌ ತನಗೆ ಒದಗಿಸಲಾಗಿರುವ ಭದ್ರತೆ ಖಾತರಿಪಡಿಸಲು ಮತ್ತು ಬೇರಾವುದೇ ರಾಜ್ಯದ ಪೊಲೀಸರಿಗೆ ತನ್ನನ್ನು ಒಪ್ಪಿಸುವ ಮೊದಲು ತನ್ನ ವಕೀಲರಿಗೆ ತಿಳಿಸಲು ತಿಹಾರ್‌ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾನೆ.

- Advertisement -

ಸದ್ಯ ಬೇರೊಂದು ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿರುವ ಲಾರೆನ್ಸ್‌, ʼಪಂಜಾಬ್‌ ಪೊಲೀಸರು ತನ್ನನ್ನು ವಶಕ್ಕೆ ಪಡೆದು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಬಹುದು ಎಂಬ ಬಲವಾದ ಆತಂಕ ಇದೆʼ ಎಂಬುದಾಗಿ ಅರ್ಜಿಯಲ್ಲಿ ಆರೋಪಿಸಿದ್ದಾನೆ. ಇದರಿಂದಾಗಿ ಪಂಜಾಬ್ ಸರ್ಕಾರಕ್ಕೆ ರಾಜಕೀಯ ಮೈಲೇಜ್‌ ದೊರೆಯುತ್ತದೆ ಎಂದು ಆತ ಹೇಳಿದ್ದಾನೆ.

“ಆರೋಪಿಯಾಗಿರುವ ಅರ್ಜಿದಾರ ನ್ಯಾಯಯುತ ಮತ್ತು ನೈಜ ತನಿಖೆಗೆ ಅರ್ಹರಾಗಿದ್ದಾರೆ. ಜೊತೆಗೆ ಪ್ರಾಸಿಕ್ಯೂಷನ್‌ ಸಮತೋಲಿತ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ತನಿಖೆ ವಿವೇಚನಾಯುಕ್ತ, ನ್ಯಾಯೋಚಿತ, ಪಾರದರ್ಶಕ ಹಾಗೂ ತ್ವರಿತವಾಗಿ ನಡೆಯಬೇಕು ಮತ್ತು ತನಿಖಾಧಿಕಾರಿ ಆರೋಪಿಯ ಜೀವಕ್ಕೆ ಭದ್ರತೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

- Advertisement -

ಕಾಂಗ್ರೆಸ್‌ ನಾಯಕ ಹಾಗೂ ಗಾಯಕ ಮೂಸೆ ವಾಲಾ (28) ಕಳೆದ ಭಾನುವಾರ ಎಸ್‌ಯುವಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು. ಕೊಲೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದ್ದು, ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್ ಹತ್ಯೆಯ ಹೊಣೆ ಹೊತ್ತಿದ್ದ ಎಂದು ಪಂಜಾಬ್ ಪೊಲೀಸರು ಹೇಳಿದ್ದರು. ಲಾರೆನ್ಸ್‌ ಆಪ್ತ ಸಹಾಯಕ ಬ್ರಾರ್‌ ಎನ್ನಲಾಗಿದೆ.

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp