ಬೆಂಗಳೂರು: ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷವನ್ನ ಬೆಂಬಲಿಸಿ, ಕೋಮುವಾದ ಪಕ್ಷವನ್ನ ದೂರವಿಡಲು ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮನವಿ ಮಾಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಎಚ್.ಡಿ ರೇವಣ್ಣ, ನಮ್ಮ ಬಳಿ 32 ಮತಗಳಷ್ಟೇ ಇವೆ, ಎರಡೂ ರಾಷ್ಟ್ರೀಯ ಪಕ್ಷ ಇದೆ. ಅದರಲ್ಲಿ ಒಂದು ಕೋಮುವಾದಿ ಪಕ್ಷ, ಮತ್ತೊಂದು ಕೋಮುವಾದದ ವಿರುದ್ಧ ಇರುವ ರಾಷ್ಟ್ರೀಯ ಪಕ್ಷವಾಗಿದೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಶುಕ್ರವಾರ ಸೋನಿಯಾ ಗಾಂಧಿ ಜೊತೆ ದೇವೇಗೌಡರು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸಿಗೆ ಮತ ಇಲ್ಲದಿದ್ದರೂ ದಿಢೀರಾಗಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಅವರಿಗೂ ಮನವಿ ಮಾಡುತ್ತೇನೆ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ, ಕೋಮುವಾದ ಪಕ್ಷವನ್ನ ದೂರ ಇಡಲು ಕಾಂಗ್ರೆಸ್ ನಮ್ಮನ್ನ ಬೆಂಬಲಿಸಬೇಕು ಎಂದು ವಿನಂತಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲು ಸೋನಿಯಾಗಾಂಧಿ ಜೊತೆ ಚರ್ಚೆ ನಡೆಸಿದ್ದು, ಕುಪೇಂದ್ರ ರೆಡ್ಡಿ ಅವರೂ ಡಿಕೆಶಿಯನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದೇವೆ ಎಂದು ಹೇಳಿದ್ದಾರೆ.