ನವದೆಹಲಿ: ಇತ್ತೀಚೆಗೆ ಪಕ್ಷ ತೊರೆದ ಗುಜರಾತಿನ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗುರುವಾರ ಬಿಜೆಪಿಗೆ ಸೇರಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2019 ರಲ್ಲಿ ಕಾಂಗ್ರೆಸ್ ನೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ 28 ವರ್ಷದ ಗುಜರಾತ್ ಪಾಟೀದಾರ್ ನಾಯಕ ಮೇ 18 ರಂದು ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ಬರೆದು, ಪಕ್ಷವನ್ನು ತೊರೆದಿದ್ದರು. ಪತ್ರದಲ್ಲಿ ಅವರು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು, “ಉನ್ನತ ನಾಯಕರು” ತಮ್ಮ ಮೊಬೈಲ್ ಫೋನ್ಗಳಿಂದ ವಿಚಲಿತರಾಗಿದ್ದಾರೆ ಮತ್ತು ಗುಜರಾತ್ ಕಾಂಗ್ರೆಸ್ ನಾಯಕರು ಅವರಿಗೆ ಚಿಕನ್ ಸ್ಯಾಂಡ್ವಿಚ್ ಗಳನ್ನು ಪೂರೈಕೆ ಮಾಡುವುದರಲ್ಲೇ ತಲ್ಲೀಣರಾಗಿದ್ದಾರೆ ಎಂದು ಹೇಳಿದ್ದರು. ತಾನು ಕಾಂಗ್ರೆಸ್ ನಲ್ಲಿ ಮೂರು ವರ್ಷಗಳನ್ನು “ವ್ಯರ್ಥ” ಮಾಡಿದ್ದೇನೆ ಎಂದು ಕೂಡಾ ಹೇಳಿದ್ದರು.
ಹಾರ್ದಿಕ್ ಬಿಜೆಪಿಗೆ ಸೇರುವುದನ್ನು ಅಧಿಕೃತವಾಗಿ ನಿರಾಕರಿಸುತ್ತಿದ್ದರೂ ಬಿಜೆಪಿ ಪಕ್ಷ ಮತ್ತು ಅದರ ನಾಯಕತ್ವದ ಬಗ್ಗೆ ಅವರ ಹೊಗಳಿಕೆಯು ವಿಭಿನ್ನ ಕಥೆಯನ್ನು ಹೇಳುತ್ತಿದೆ. ನಿನ್ನೆಯೂ ಕೂಡಾ ಬಿಜೆಪಿ ಸೇರುವ ಊಹಾಪೋಹಗಳನ್ನು ಅಲ್ಲಗಳೆದಿದ್ದರೂ ಗುರುವಾರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಲಿದ್ದಾರೆ ಎಂದು ಖಚಿತ ಮೂಲಗಳಿಂದ ಮಾಹಿತಿ ದೊರಕಿವೆ.