ಆರೆಸ್ಸೆಸ್ ಶಾಖೆಗಳಿಗೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ನಳಿನ್ ಕುಮಾರ್ ಅವರೇ ಜೀವಂತ ಉದಾಹರಣೆ: ಸಿದ್ದರಾಮಯ್ಯ

Prasthutha|

►97 ವರ್ಷಗಳ ಇತಿಹಾಸವಿರುವ ಆರ್.ಎಸ್.ಎಸ್. ನನ್ನದೊಂದು ಸರಳ ಪ್ರಶ್ನೆಗೆ ಉತ್ತರಿಸಲಾಗದಷ್ಟು ದುರ್ಬಲ ಸಂಘಟನೆಯೇ?

- Advertisement -

ಬೆಂಗಳೂರು: ನಿಮ್ಮ ಸಂಘದಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ? ಇಂತಹದ್ದೊಂದು ಸರಳ ಪ್ರಶ್ನೆಗೆ ಆರ್.ಎಸ್.ಎಸ್. ನಲ್ಲಿ ಉತ್ತರ ಇಲ್ಲ ಎನ್ನುವುದೇ ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಆರ್.ಎಸ್.ಎಸ್. ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಸರಳ ಪ್ರಶ್ನೆಗೆ ಉತ್ತರಿಸಲಾಗದ ಆರೆಸ್ಸೆಸ್, ಕರ್ನಾಟಕ ಬಿಜೆಪಿಯ ಕೂಗುಮಾರಿಗಳನ್ನು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ಛೂ ಬಿಟ್ಟಿದೆ. 97 ವರ್ಷಗಳ ಇತಿಹಾಸವಿರುವ ಆರ್.ಎಸ್.ಎಸ್. ನನ್ನದೊಂದು ಸರಳ ಪ್ರಶ್ನೆಗೆ ಉತ್ತರಿಸಲಾಗದಷ್ಟು ದುರ್ಬಲ ಸಂಘಟನೆಯೇ ಎಂದು ಪ್ರಶ್ನಿಸಿದ್ದಾರೆ.

- Advertisement -

ಬಿಜೆಪಿಯ ಒಬ್ಬ ನಾಯಕರು ಆರ್.ಎಸ್.ಎಸ್. ಶಾಖೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ, ಇನ್ನೊಬ್ಬರು ಆರ್.ಎಸ್.ಎಸ್. ಪುಸ್ತಕ ಓದಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಗೆ ಹೋಗಿ, ಓದಿ ಏನನ್ನು ಕಲಿಯುವುದು? 40% ಕಮಿಷನ್ ಹೊಡೆಯುವುದಾ? ದುಡ್ಡು ಪಡೆದು ಪಕ್ಷಾಂತರ ಮಾಡುವುದಾ? ನನ್ನ ಮೇಲೆ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರ ಮಾತುಗಳೇ ಆರ್.ಎಸ್.ಎಸ್. ತನ್ನ ಸ್ವಯಂಸೇವಕರಿಗೆ ಕಲಿಸಿಕೊಡುವ ಸಂಸ್ಕಾರ- ಸಂಸ್ಕೃತಿ ಏನು ಎನ್ನುವುದನ್ನು ಸೂಚಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಆರ್.ಎಸ್.ಎಸ್. ಶಾಖೆಗಳಿಗೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರೇ ಜೀವಂತ ಉದಾಹರಣೆ. ಸಂಸ್ಕೃತಿ, ಸಂಸ್ಕಾರ, ಸಚ್ಛಾರಿತ್ರ್ಯದಂತಹ ಮೌಲ್ಯಗಳಿಗೂ, ನಿತ್ಯ ಶಬ್ದಭೇದಿ ಮಾಡುತ್ತಿರುವ ಕಟೀಲ್ ಅವರಿಗೂ ಏನಾದರೂ ಸಂಬಂಧವಿದೆಯೇ? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೌರವಾನ್ವಿತ ನಾಯಕರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ. ಹಿಂದುಗಳೆಲ್ಲ ಒಂದು ಎನ್ನುವ ನಿಮ್ಮ ಸಂಘದ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಉಳಿದ ಜಾತಿಗಳು ಯಾಕೆ ಅಸ್ಪೃಶ್ಯವಾಗಿವೆ? ದಯವಿಟ್ಟು ಉತ್ತರಿಸಿ ಎಂದು ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.



Join Whatsapp