ಬೆಂಗಳೂರು: ‘ಶಾಲಾ ಪಠ್ಯಪುಸ್ತಕದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿರುವ, ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಗೆ ಅಪಮಾನ ಮಾಡಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಶಿಕ್ಷಣ ಸಚಿವ ನಾಗೇಶ್ ಹಾಗೂ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ವಿಚಾರವಾಗಿ ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡುತ್ತಿದ್ದು, ಇತಿಹಾಸವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಯಾವುದೇ ಸಮಿತಿಯ ಅಧ್ಯಕ್ಷರಾದವರು ತಮ್ಮದೇ ಆದ ವರ್ಚಸ್ಸು ಇಟ್ಟುಕೊಂಡಿರಬೇಕು. ಆದರೆ ಆ ವ್ಯಕ್ತಿಗೆ ಕನ್ನಡ ಭಾಷೆ, ಬಾವುಟದ ಬಗ್ಗೆಯೇ ಗೌರವವಿಲ್ಲ. ರಾಷ್ಟ್ರಕವಿ ಕುವೆಂಪು ಅವರ ಆಚಾರ, ವಿಚಾರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಪ್ಪಿ, ಅವರಿಗೆ ಎಲ್ಲ ರೀತಿಯ ಗೌರವಗಳನ್ನು ನೀಡಿವೆ. ಅವರ ನಾಡಗೀತೆ ಮೂಲಕ ನಾವು ನಮ್ಮ ನಾಡಿನ ಬಗ್ಗೆ ಮುಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡುತ್ತಿದ್ದೇವೆ. ಅಂತಹವರ ಬಗ್ಗೆ ಈ ವ್ಯಕ್ತಿ ಅವಹೇಳನಕಾರಿ ಮಾತಾಡಿರುವುದು ಖಂಡನೀಯ ಎಂದರು.
ಕುವೆಂಪು ಅವರ ಬಗ್ಗೆ ಕನಿಷ್ಠ ಪ್ರೀತಿ, ಗೌರವ ಇಟ್ಟುಕೊಂಡಿರಬೇಕು. ನಮ್ಮ ರಾಜ್ಯದ ಕವಿಗಳಿಗೆ ಅಪಮಾನ ಮಾಡಿರುವುದು ಹಾಗೂ ರಾಜ್ಯದ ಇತಿಹಾಸವನ್ನು ತಿರುಚುತ್ತಿರುವುದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಈ ರಾಜ್ಯದ ಸಾಹಿತಿಗಳು, ಸಂಘಟನೆಗಳು, ಶಿಕ್ಷಕರು, ವಿದ್ಯಾರ್ಥಿಗಳು ಈ ವಿಚಾರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡುತ್ತೇನೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೂಡಲೇ ರದ್ದು ಮಾಡಿ, ಈ ಹಿಂದಿನ ವರ್ಷಗಳಲ್ಲಿ ಇದ್ದ ಪಠ್ಯವನ್ನೇ ಯಾವುದೇ ಬದಲಾವಣೆ ಮಾಡದೇ ಈ ವರ್ಷವೂ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಈ ಹಿಂದೆ ಇದ್ದ ಪಠ್ಯ ಪುಸ್ತಕಗಳನ್ನು ಓದಿಕೊಂಡೆ ಅನೇಕರು ವಿದ್ಯಾವಂತರಾಗಿದ್ದಾರೆ. ನಮಗೆ ಜ್ಞಾನ, ಮಾತನಾಡುವ ಶಕ್ತಿಯನ್ನು ಕೊಟ್ಟಿರುವ, ಹಿರಿಯರ ಮಾರ್ಗದರ್ಶನ ಹೊಂದಿರುವ ಪಠ್ಯ ಪುಸ್ತಕವನ್ನು ಬದಲಿಸಲು ಮುಂದಾಗಿರುವುದು ಅಕ್ಷಮ್ಯ. ನೀವು ಇಷ್ಟು ಪ್ರಮಾಣದಲ್ಲಿ ಮಾತನಾಡಲು ಶಕ್ತಿ ಕೊಟ್ಟಿರುವುದು ಇದೇ ಪಠ್ಯ ಪುಸ್ತಕಗಳಲ್ಲವೇ? ಇದನ್ನು ಯಾವ ಕಾರಣಕ್ಕೆ ಬದಲಿಸಲು ಪ್ರಯತ್ನಿಸುತ್ತಿದ್ದೀರಿ. ಇವರ ಈ ಪ್ರಯತ್ನ ನೋಡಿದರೆ ನಮ್ಮ ಇತಿಹಾಸದ ಬಗ್ಗೆ ನಮಗೆ ಅನುಮಾನ ಮೂಡುವಂತೆ ಮಾಡುತ್ತಿದೆ. ಹೀಗಾಗಿ ಪಠ್ಯ ಬದಲಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸುತ್ತೇನೆ ತಿಳಿಸಿದರು.
ನವಸಂಕಲ್ಪ ಚಿಂತನ ಶಿಬಿರ:
ರಾಷ್ಟ್ರದುದ್ದಗಲದ 400ಕ್ಕೂ ಹೆಚ್ಚಿನ ಕಾಂಗ್ರೆಸ್ ನಾಯಕರು ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಕಾಲ ನವ ಸಂಕಲ್ಪ ಚಿಂತನಾ ಶಿಬಿರ ಕಾರ್ಯಕ್ರಮದಲ್ಲಿ ಹಲವು ವಿಚಾರವಾಗಿ ಚರ್ಚೆ ಮಾಡಿದ್ದೆವು. ಅಲ್ಲಿ ಸಾಕಷ್ಟು ಮಂದಿ ನಮಗೆ ಮಾರ್ಗದರ್ಶನ ನೀಡಿದ್ದಾರೆ.
ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜೂನ್ 2 ಹಾಗೂ 3ರಂದು ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ನಾಳೆ ಈ ಕಾರ್ಯಕ್ರಮದ ಸಮಿತಿ ಸಭೆ ಮಾಡಲಾಗುವುದು. ಈ ಸಭೆಯಲ್ಲಿ ರಾಷ್ಟ್ರಮಟ್ಟದಲ್ಲಿ ಆಗಿರುವ ಚರ್ಚೆ ಹಾಗೂ ತೀರ್ಮಾನಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಅನೇಕ ವಿಚಾರಗಳ ಬಗ್ಗೆ ರಾಜ್ಯ ನಾಯಕರ ಜತೆ ಚರ್ಚೆ ಮಾಡಲಾಗುವುದು.
ಆರ್ಥಿಕ ವ್ಯವಹಾರಗಳ ಸಮಿತಿಗೆ ವೀರಪ್ಪ ಮೋಯ್ಲಿ ಅವರು ಅಧ್ಯಕ್ಷರಾಗಿದ್ದರೆ ರಾಜೀವ್ ಗೌಡ ಆವರು ಅಡ್ಮಿನರ್ ಆಗಿದ್ದಾರೆ. ಇನ್ನು ರೆಹಮಾನ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಮಿತಿ ಮಾಡಲಾಗಿದೆ. ರಾಜ್ಯದ ಸಂಘಟನೆ ಸಂಘಟನೆ ಸಮಿತಿಯ ಅಧ್ಯಕ್ಷತೆಯನ್ನು ಬಿ.ಕೆ. ಹರಿಪ್ರಸಾದ್ ಹಾಗೂ ಸಂಚಾಲಕರಾಗಿ ನಾಸಿರ್ ಹುಸೇನ್ ಅವರನ್ನು ನೇಮಿಸಲಾಗಿದೆ. ಕೃಷಿ ಕ್ಷೇತ್ರದ ಸಮಿತಿಯಲ್ಲಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ಅವರು ನೇಮಿಸಲಾಗಿದೆ. ಯುವಕರು, ಮಹಿಳೆಯರು, ಶಿಕ್ಷಣ ಹಾಗೂ ಉದ್ಯೋಗ ಸಮಿತಿಗೆ ಅಧ್ಯಕ್ಷರಾಗಿ ಕೃಷ್ಣ ಭೈರೇಗೌಡ ಹಾಗೂ ಸಂಚಾಲಕರಾಗಿ ಶರತ್ ಬಚ್ಚೇಗೌಡ ಅವರನ್ನು ನೇಮಿಸಲಾಗಿದೆ. ರಾಜಕೀಯ ವ್ಯವಹಾರಗಳು, ಎಐಸಿಸಿ ಕಾರ್ಯಕ್ರಮಗಳ ಜಾರಿ ಸಮಿತಿಯ ಅಧ್ಯಕ್ಷರಾಗಿ ಡಾ.ಜಿ. ಪರಮೇಶ್ವರ್ ಹಾಗೂ ಸಂಚಾಲಕರಾಗಿ ಜಿ.ಸಿ ಚಂದ್ರಶೇಖರ್ ಅವರನ್ನು ನೇಮಿಸಲಾಗಿದೆ. ಪ್ರತಿ ಸಮಿತಿಯಲ್ಲಿ 20-25 ಸದಸ್ಯರನ್ನು ನೇಮಿಸಲಾಗುವುದು.
ಈ ಸಭೆಗೆ ಸುಮಾರು 500 ಜನರಿಗೆ ಆಹ್ವಾನ ನೀಡಲಾಗುವುದು. ಪರಾಜಿತ ಅಭ್ಯರ್ಥಿಗಳು, ಶಾಸಕರು, ಪರಿಷತ್ ಸದಸ್ಯರು, ಸಂಸದರು, ಮುಂಚೂಣಿ ಘಟಕಗಳ ಮುಖಂಡರು ಹಾಗೂ ನಾಯಕಿಯರಿಗೆ ಆಹ್ವಾನ ನೀಡಲಾಗಿದೆ.
ಈ ಸದಸ್ಯರನ್ನು 6 ಸಮಿತಿಗಳಾಗಿ ವಿಭಾಗ ಮಾಡಿದ್ದು , ಅವು ಚರ್ಚೆ ಮಾಡಿ ಪಕ್ಷಕ್ಕೆ ಸಲಹೆ ಸೂಚನೆಗಳನ್ನು ನೀಡಲಾಗುವುದು. ಎಐಸಿಸಿ ಅವರು ಕೊಟ್ಟಿರುವ ಕಾರ್ಯಕ್ರಮವನ್ನು ನಾನು ಹಾಗೂ ಸಿದ್ದರಾಮಯ್ಯನವರು ಎಲ್ಲರಿಗೂ ತಿಳಿಸುತ್ತೇವೆ. ಪಕ್ಷ ಮುಂದಿನ ದಿನಗಳಲ್ಲಿ ಹೇಗೆ ಸಾಗಬೇಕು, ಅದಕ್ಕಾಗಿ ಯಾವ ಕಾರ್ಯಕ್ರಮ ರೂಪಿಸಬೇಕು ಎಂದು ತೀರ್ಮಾನಿಸಲಾಗುವುದು. ರಾಜ್ಯದ ಎಲ್ಲ ಕಾರ್ಯಕರ್ತರಿಗೂ ಪಕ್ಷದ ಸಂಘಟನೆಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವುದಿದ್ದರೆ ಜೂ.2ರ ಒಳಗೆ ಬರವಣಿಗೆ ಮೂಲಕ ಕಳುಹಿಸಿಕೊಡಬೇಕು.
ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳು, ರಾಜ್ಯಕ್ಕೆ ಆಗಿರುವ ಅನ್ಯಾಯ ಹಾಗೂ ರಾಜ್ಯದಲ್ಲಿ ಧೃವೀಕರಣದ ಪ್ರಯತ್ನಗಳು ಸೇರಿದಂತೆ ಎಲ್ಲ ಪ್ರಮುಖ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಲಾಗುವುದು.’ ಎಂದರು.
ಪ್ರಶ್ನೋತ್ತರ:
ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ನವರು ಅಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರದಲ್ಲಿ ನಾವು ಮಾತನಾಡುವುದು ಪಕ್ಕಕ್ಕಿಟ್ಟು, ಬಿಜೆಪಿ ಶಾಸಕರಾದ ವಿಶ್ವನಾಥ್ ಅವರು ಏನು ಹೇಳಿದ್ದಾರೆ ಎಂದು ನೋಡಿ. ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ವಿಶ್ವನಾಥ್ ಅವರ ಹೇಳಿಕೆಗೆ ಉತ್ತರ ನೀಡಲಿ. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಸಂರಚನೆಯೇ ಸರಿಯಿಲ್ಲ. ಆ ಸಮಿತಿಯ ಮುಖ್ಯಸ್ಥರೇ ಸರಿ ಇಲ್ಲ’ ಎಂದರು.
ಆರ್ ಎಸ್ಎಸ್ ಸಂಘಟನೆಯನ್ನು ನಪುಂಸಕ ಸಂಘ ಎಂಬ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ವಿಚಾರದಲ್ಲಿ ನಮ್ಮ ನಾಯಕರು ಏನು ಹೇಳಿದ್ದಾರೋ ನೋಡಬೇಕು. ಯಾವುದೇ ಪಕ್ಷದ ನಾಯಕರಾಗಲಿ, ಅವರವರ ಪಕ್ಷದ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಾರೆ. ಯಾರಿಗೂ ಕೂಡ ಅಗೌರವ ಕೊಡಬಾರದು. ಯಾರಿಗೂ ಕೂಡ ಅಗೌರವತರುವ ವಿಚಾರ ಇರಬಾರದು. ನಾನಾಗಲಿ ನನ್ನ ಪಾರ್ಟಿಯಾಗಲಿ ಯಾರೇ ಆಗಲಿ ಮಾತನಾಡಬಾರದು. ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಭಯೋತ್ಪಾದಕರು ಎಂದು ಕರೆದರು. ಇದು ಸರಿನಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ತ್ರಿವರ್ಣ ಧ್ವಜ, ಸಂವಿಧಾನ ಕೊಟ್ಟವರು ಭಯೋತ್ಪಾದಕರಾ? ಹಾಗಾದರೆ ಗಾಂಧಿ, ನೆಹರೂ, ಇಂದಿರಾ ಗಾಂಧಿ, ಮೌಲಾನ ಆಜಾದ್, ಸುಭಾಷ್ ಚಂದ್ರ ಬೋಸ್ ಇವರೆಲ್ಲಾ ಭಯೋತ್ಪಾದಕರಾ?’ ಎಂದು ಪ್ರಶ್ನೆಸಿದರು.
ಇನ್ನು ಆರ್ಯ ದ್ರಾವಿಡ ವಿಚಾರವಾಗಿ ಎದ್ದಿರುವ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯ ನವರು ಹಿರಿಯರಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಿದ್ದಾರೆ. ನಾನು ಇದರ ಬಗ್ಗೆ ಹೆಚ್ಚು ಅಧ್ಯಯನ ಮಾಡಿಲ್ಲ. ನಾನು ಹುಟ್ಟಿದ್ದು ಇತ್ತಿಚೆಗೆ. ನನಗೆ 60 ವರ್ಷ. ಸಿದ್ದರಾಮಯ್ಯ ನವರು ಹಿರಿಯರಿದ್ದಾರೆ. ಈ ಬಗ್ಗೆ ನಾನು ಪುಸ್ತಕ ಎಲ್ಲಾ ಓದಿಕೊಂಡು ಹೇಳ್ತಿನಿ’ ಎಂದು ತಿಳಿಸಿದರು.
ರಾಜ್ಯಸಭೆ ಟಿಕೆಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮಲ್ಲಿ ಕೆಲವರಿಗೆ ಅನ್ಯಾಯವಾಗಿದೆ. ಅವರು ನಮ್ಮ ಸ್ನೇಹಿತರಿದ್ದು, ಅತಿ ಶೀಘ್ರದಲ್ಲಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.
ಇನ್ನು ಜೈರಾಮ್ ರಮೇಶ್ ಅವರ ಕೊಡುಗೆ ಏನು ಎಂಬ ಸುದರ್ಶನ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರದ ಬಗ್ಗೆ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಹೇಳುತ್ತೇನೆ’ ಎಂದರು.
ಕಾಂಗ್ರೆಸ್ ಮಹಾನಾಯಕ ನನ್ನನ್ನು ತುಳಿಯಲು ಸಾಧ್ಯವಿಲ್ಲ ಎಂಬ ಮುದ್ದಹನುಮೇಗೌಡರ ಹೇಳಿಕೆ ವಿಚಾರವಾಗಿ ಪ್ರಶ್ನೆ ಕೇಳಿದಾಗ, ‘ಯಾರು ಯಾರನ್ನೂ ತುಳಿಯಲು ಸಾಧ್ಯವಿಲ್ಲ’ ಎಂದರು.
ಇನ್ನು ರಾಜ್ಯಸಭೆಗೆ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮದೂ ಕೆಲವು ಲೆಕ್ಕಾಚಾರ ಇರುತ್ತವೆ. ಎಲ್ಲರಿಗೂ ಹೆಚ್ಚುವರಿ ಅಭ್ಯರ್ಥಿ ಗೆಲ್ಲಿಸಲು ಮತಗಳ ಕೊರತೆ ಇದೆ. ನಾವು ಕಳೆದ ಬಾರಿ ಬಹಳ ಗೌರವದಿಂದ ಅಭ್ಯರ್ಥಿ ಹಾಕಲಿಲ್ಲ. ನಾವು ಬೆಂಬಲ ಕೇಳುವ ವಿಚಾರವಾಗಿ ಏನನ್ನೂ ಹೇಳುವುದಿಲ್ಲ’ ಎಂದರು.