ನಿಂತಿದ್ದ ಲಾರಿಗೆ ಟಾಟಾ ಏಸ್ ಡಿಕ್ಕಿ: 6 ಮಂದಿ ಸಾವು

Prasthutha|

ರಂಟಚಿಂತಲ (ಆಂಧ್ರ ಪ್ರದೇಶ): ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಏಸ್ ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡ ದುರ್ಘಟನೆ ರಂಟಚಿಂತಲ ಬಳಿ ನಡೆದಿದೆ.

- Advertisement -

ಮೃತರನ್ನು ಕೋಟೇಶ್ವರಿ (45), ರೋಶಮ್ಮ (65), ರಮಾದೇವಿ (50), ಕೋಟಮ್ಮ (70), ರಮಣ (50) ಮತ್ತು ಲಕ್ಷ್ಮೀನಾರಾಯಣ (35) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಗುಂಟೂರು ಜನರಲ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರಲ್ಲಿ ಮೂವರು ಸ್ಥಿತಿ ಚಿಂತಾಜನಕವಾಗಿದೆ.

- Advertisement -

ಮೃತರೆಲ್ಲರೂ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಇನ್ನೇನು ಮನೆ ತಲುಪಬೇಕು ಎನ್ನುವಷ್ಟರಲ್ಲೇ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದರಿಂದ ಮೃತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಅಪಘಾತ ಸಂಭವಿಸಿದ ಪ್ರದೇಶ ಕಗ್ಗತ್ತಲಿನಿಂದ ಕೂಡಿದ್ದು, ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳು ಕಾಣಿಸುವುದಿಲ್ಲ. ಹೀಗಾಗಿ ಲಾರಿ ನಿಂತಿದ್ದು ಕಾಣಿಸದೇ ಚಾಲಕ ಬಂದು ಡಿಕ್ಕಿ ಹೊಡೆದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹಗಳನ್ನು ಹೊರ ತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಿನ್ನೆಯಷ್ಟೇ ಅಯೋಧ್ಯೆಗೆ ಹೊರಟ ಬೀದರ್ ನ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.



Join Whatsapp