ನಾಪೂಕ್ಲು: ಕೊಳಕ್ಕೇರಿಯಲ್ಲಿ ವೆಸ್ಟ್ ಕೊಳಕ್ಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಶಿರವಸ್ತ್ರವನ್ನು ಅವಮಾನಿಸಿ ಕುಣಿದು ಕುಪ್ಪಳಿಸಿದ ಘಟನೆಯನ್ನು ಎಸ್ ಡಿಪಿಐ ನಾಲ್ಕು ನಾಡು ಬ್ಲಾಕ್ ಸಮಿತಿ ಅಧ್ಯಕ್ಷ ಅಬೂಬಕ್ಕರ್ ತೀವ್ರವಾಗಿ ಖಂಡಿಸಿದ್ದಾರೆ.
ಘಟನೆ ನಡೆಯುವಾಗ ಕಾಂಗ್ರೆಸ್ ಎಂ.ಎಲ್.ಸಿ ವೀಣಾ ಅಚ್ಚಯ್ಯ ವೇದಿಕೆ ಮುಂಭಾಗದಲ್ಲೇ ಇದ್ದರೂ ಘಟನೆಯ ಬಗ್ಗೆ ಯಾವುದೇ ಆಕ್ಷೇಪಣೆ ಎತ್ತದೆ ಮೌನ ಸಮ್ಮತಿ ನೀಡಿರುವುದು ವಿಪರ್ಯಾಸವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಜೀವಂತವಾಗಿರುವಾಗ ಮುಸ್ಲಿಮರನ್ನು ಪ್ರಚೋದಿಸಲು ಈ ರೀತಿಯ ಕುಕೃತ್ಯ ನಡೆಸಲಾಗಿದೆ ಎಂದು ಆರೋಪಿಸಿರುವ ಅಬೂಬಕ್ಕರ್, ಕೆಲವು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಂಬಲ್ಲಿ ಮುಸ್ಲಿಂ ಮದುಮಗ ಮುಖಕ್ಕೆ ಕಪ್ಪು ಮಸಿ ಬಳಿದದ್ದನ್ನೇ ನೆಪವಾಗಿರಿಸಿ ಕೊರಗಜ್ಜನಿಗೆ ಅವಮಾನ ಮಾಡಲಾಗಿದೆಯೆಂದು ಆರೋಪಿಸಿ ಸಂಘಪರಿವಾರದ ಒತ್ತಡಕ್ಕೆ ಮಣಿದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದ ಪೋಲೀಸರು, ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಮುಸ್ಲಿಮರ ಧಾರ್ಮಿಕ ನಂಬಿಕೆಗೆ ಘಾಸಿ ಮಾಡುವಂತೆ ಶಿರವಸ್ತ್ರವ ಧರಿಸಿ ಕುಣಿದು ಕುಪ್ಪಳಿಸಿದ ಪುಂಡರ ಮೇಲೆ ಹಾಗೂ ಕಾರ್ಯಕ್ರಮದ ಆಯೋಜಕರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಅಬೂಬಕ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.