ಬಾಗಲಕೋಟೆ: ಕಾಲೇಜೊಂದರ ಆವರಣದಲ್ಲಿ ಸ್ಕಲ್ ಟೋಪಿ ಧರಿಸಿದ್ದನ್ನೆ ನೆಪವಾಗಿಸಿ ವಿದ್ಯಾರ್ಥಿಯೊಬ್ಬನಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರು, ಸಬ್ ಇನ್ಸ್’ಪೆಕ್ಟರ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಬನಹಟ್ಟಿ ಜಿಲ್ಲಾ ನ್ಯಾಯಾಲಯದ ಸೂಚನೆಯಂತೆ ರಾಜ್ಯದ ಬಾಗಲಕೋಟೆ ಜಿಲ್ಲೆಯ ತೇರದಾಳ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿ ನವೀದ್ ಹಸನ್ ಸಾಬ್ ಥರತಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಫೆಬ್ರವರಿ 18 ರಂದು ತೇರದಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಕಲ್ ಟೋಪಿ ಧರಿಸಿ ಬಂದಿದ್ದ ವೇಳೆ ತನ್ನನ್ನು ಅವಮಾನಿಸಿ ಸಂಸ್ಥೆಯೊಳಗೆ ಬರದಂತೆ ತಡೆದು ಧಾರ್ಮಿಕ ಭಾವನೆಗಳಿಗೆ ಚ್ಯುತಿ ಮಾಡಿದ್ದಾರೆ ಎಂದು ನವೀದ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಧರ್ಮವನ್ನು ಅವಮಾನಿಸಿ ಕಾಲೇಜಿನಿಂದ ಬಹಿಷ್ಕಾರ ಹಾಕಿದ ಪ್ರಾಂಶುಪಾಲ ಮತ್ತು ಎಸ್. ಐ ವಿರುದ್ಧ ದೂರು ದಾಖಲಿಸುವಂತೆ ಕೋರಿ ಸಂತ್ರಸ್ತ ನವೀದ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಜೂನ್ 30 ರಂದು ಕೈಗೆತ್ತಿಕೊಳ್ಳಲಿದ್ದು, ಜಮಖಂಡಿ ಉಪ ಎಸ್ಪಿ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಿದೆ.
ನವೀದ್ ಮತ್ತು ಆತನ ತಂದೆ ತನ್ನ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಪ್ರಾಂಶುಪಾಲರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.