ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗಳನ್ನು ಪ್ರತಿಭಟನೆಯ ಸ್ಥಳದಲ್ಲಿ ಭೇಟಿಯಾಗಿ ಮನವೊಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ಶೇ. 7.5 ರಷ್ಟು ಮೀಸಲಾತಿ ನೀಡಲು ಇರುವ ತೊಡಕುಗಳು ಹಾಗೂ ಇವುಗಳನ್ನು ಬಗೆಹರಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಮುಖ್ಯಮಂತ್ರಿಯವರು ವಿವರಿಸಿದರು.
ಸುಪ್ರೀಂ ಕೋರ್ಟಿನ ಆದೇಶದಂತೆ ಶೇ. 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇಂದ್ರಾ ಸಹಾನಿ ಪ್ರಕರಣ ಪ್ರಮುಖವಾದುದು. ಇದರ ಸಾಧಕ ಬಾಧಕಗಳ ಅಧ್ಯಯನ ನಡೆಸಿ, ಈಗಾಗಲೇ ವಿರೋಧ ಪಕ್ಷಗಳ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಕೇಂದ್ರ ಸರ್ಕಾರದಂತೆ ಶೇ. 7.5 ರಷ್ಟು ಮೀಸಲಾತಿ ನಿಗದಿ ಪಡಿಸಲು ಇರುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲು ರಚಿಸಿರುವ ಸಮಿತಿಯು ವರದಿ ಸಲ್ಲಿಸಿದ ನಂತರ ಸರ್ಕಾರ ಕಾನೂನಾತ್ಮಕವಾಗಿ ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮೀಸಲಾತಿಗಾಗಿ ಕಳೆದ ಕೆಲವು ವರ್ಷಗಳಿಂದ ಹೋರಾಟ ನಡೆಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ರಚಿಸಲಾದ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿಯೂ ವರದಿ ಸಲ್ಲಿಸಿದೆ. ಇದಲ್ಲದೆ, ಪರಿಶಿಷ್ಟ ಪಂಗಡಗಳ ಸ್ಥಿತಿ ಗತಿ, ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯದ ಸಮಯದಲ್ಲಿ ಹಾಗೂ ಈಗಿನ ಜನಸಂಖ್ಯೆ ಹೀಗೆ ಎಲ್ಲ ಅಂಶಗಳ ಮಾಹಿತಿ ಹಾಗೂ ಅರಿವು ನನಗಿದೆ. ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಒಳ್ಳೆಯದು ಮಾಡುವ ಸದುದುದ್ದೇಶ ನಮಗೂ ಇದೆ. ಈ ಸಮುದಾಯಗಳ ಉತ್ತಮ ಭವಿಷ್ಯ ರೂಪಿಸಲು ಎಲ್ಲ ರೀತಿಯ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಸನ್ನಾನಂದಪುರಿ ಸ್ವಾಮೀಜಿಯವರು ಸಾತ್ವಿಕ ಹೋರಾಟದ ಮೂಲಕ ಸದುದ್ದೇಶದ ಸಾಧನೆಗೆ ಮುಂದಾಗಿರುವುದು ಮಾದರಿಯಾಗಿದೆ. ಗುರುಗಳೊಂದಿಗೆ ಮೀಸಲಾತಿ ಕುರಿತು ಎಲ್ಲ ಅಂಶಗಳ ಕುರಿತು ಚರ್ಚೆ ನಡೆಸಿರುವೆ. ಗುರುಗಳ ಆಶೀರ್ವಾದದಿಂದ ಸಮಾಜಕ್ಕೆ ಒಳ್ಳೆಯದು ಮಾಡುವ ಸದಿಚ್ಛೆ ನಮ್ಮದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.