ಅಗರ್ತಲಾ: ಜೂನ್ 23ರಂದು ಅಗರ್ತಲ, ಬಾರ್ದೊವಲಿ, ಸುರ್ಮಾ, ಜುಬರಾಜ್ ನಗರ್ ವಿಧಾನ ಸಭಾ ಕ್ಷೇತ್ರಗಳಿಗೆ ಮಧ್ಯಾವಧಿ ಉಪ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದೆ. ಇದು ಬಿಜೆಪಿಗೆ ಸೆಮಿ ಫೈನಲ್, ಹೊಸ ಮುಖ್ಯಮಂತ್ರಿ ಮಾಣಿಕ್ ಶಹಾಗೆ ಮೊದಲ ಕಠಿಣ ಪರೀಕ್ಷೆ ಎಂದು ಹೇಳಲಾಗಿದೆ.
ಪ್ರತಿಪಕ್ಷಗಳಾದ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಗಳಿಗೂ ಇದೊಂದು ಕಠಿಣ ಪರೀಕ್ಷೆಯೇ ಆಗಿದೆ.
ಅಗರ್ತಲದಲ್ಲಿ ಗೆದ್ದಿದ್ದ ಮಾಜಿ ಮಂತ್ರಿಯೂ ಆದ ಸುದೀಪ್ ರಾಯ್ ಬರ್ಮನ್ ಅವರು ಬಿಜೆಪಿಗೆ ಜನವರಿಯಲ್ಲಿ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರಿಂದ ಅಲ್ಲಿ ಚುನಾವಣೆ ನಡೆಯುತ್ತಿದೆ.
ದಾಲೈ ಜಿಲ್ಲೆಯ ಸುರ್ಮಾದ ಶಾಸಕ ಆಶಿಸ್ ದಾಸ್ ಅವರು ಕಳೆದ ಮೇ ತಿಂಗಳಲ್ಲಿ ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರಿದ್ದರು. ಅವರು ಶಾಸಕಾಂಗದಿಂದ ಅನರ್ಹಗೊಂಡುದರಿಂದ ಅಲ್ಲಿ ಚುನಾವಣೆ ನಡೆಯುತ್ತಿದೆ. ದಾಸ್ ಅವರು ಈಗ ಟಿಎಂಸಿಯನ್ನೂ ಬಿಟ್ಟಿದ್ದಾರೆ.
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯಾದ ಕಿರಣ್ ದಿನ್ಕರ್ ರಾವ್ ಗಿಟ್ಟೆ ಅವರು ರಾಜ್ಯದಲ್ಲಿ ಚುನಾವಣೆಗಾಗಿ ಎಲ್ಲ ರೀತಿಯ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು. ಶುಕ್ರವಾರ ಅಗರ್ತಲದಲ್ಲಿ ಗಿಟ್ಟೆಯವರು ಸರ್ವ ಪಕ್ಷಗಳ ಸಭೆಯನ್ನು ಕರೆದು ಚರ್ಚಿಸಿದಾಗ ಪ್ರತಿಪಕ್ಷಗಳವರು ಈ ಬಗೆಗೆ ಆತಂಕ ಪ್ರಕಟಿಸಿದ್ದಾರೆ.
ಕಾಂಗ್ರೆಸ್ಸಿನ ಹಿರಿಯ ನಾಯಕ ಆಶಿಸ್ ಕುಮಾರ್ ಶಹಾ ಅವರು ನ್ಯಾಯಸಮ್ಮತ ಚುನಾವಣೆ ನಡೆಯುವ ಬಗ್ಗೆ ನನಗೆ ಸ್ವಲ್ಪವೂ ನಂಬಿಕೆ ಇಲ್ಲ.“ಕಳೆದ ನಾಲ್ಕು ವರುಷಗಳಿಂದ ನಮ್ಮ ಚುನಾವಣಾ ಅನುಭವವು ಘೋರವಾದುದಾಗಿದೆ” ಎಂದ ಅವರು ಈ ಬಾರಿಯಾದರೂ ಸುರಕ್ಷಿತ ಚುನಾವಣೆ ನಡೆಸಲಿ ಎಂದು ಆಶಿಸಿದರು.
ಅಲ್ಲದೆ ಚುನಾವಣಾ ಮತ ಯಂತ್ರಗಳ ದುರ್ಬಳಕೆ ರಾಜ್ಯದಲ್ಲಿ ವ್ಯಾಪಕವಾಗಿ ಆಗುತ್ತಿದೆ. ಹಾಗಿರುವಾಗ ನ್ಯಾಯಸಮ್ಮತ ಚುನಾವಣೆ ಹೇಗೆ ನಡೆದೀತು. ನಾವೀಗ ಕಾದು ನೋಡುವುದು ಬಿಟ್ಟರೆ ಬೇರೇನು ಮಾಡಲಿಕ್ಕಿದೆ ಎಂದೂ ಆಶಿಸ್ ಕುಮಾರರು ಹೇಳಿದರು.
ಗಿಟ್ಟೆ ಸಭೆಗೆ ಹಾಜರಾದ ಸಿಪಿಎಂನ ರತನ್ ದಾಸ್ ಮತ್ತು ಟಿಎಂಸಿಯ ಪ್ರಧಾನ ಕಾರ್ಯದರ್ಶಿ ತಪಸ್ ಕುಮಾರ್ ರಾಯ್ ಸಹ ಇದೇ ಆತಂಕ ಹೊರ ಹಾಕಿದರು.
ಉಪ ಚುನಾವಣೆಯು ಮುಕ್ತವಾಗಿ ನ್ಯಾಯಬದ್ಧವಾಗಿ ನಡೆಯಲಿದೆ, ನಾವು ಸರ್ವ ಸಿದ್ಧ ಎಂದು ಬಿಜೆಪಿಯ ಬಾದಲ್ ಗೋಸ್ವಾಮಿ ಹೇಳಿದರು.
ಬಿಪ್ಲಬ್ ಕುಮಾರ್ ದೇಬ್ ಗೆ ಬದಲಾಗಿ ಹೊಸದಾಗಿ ಮುಖ್ಯಮಂತ್ರಿಯಾದ ಶಹಾರಿಗೆ ಇದು ಮೊದಲ ಕಠಿಣ ಪರೀಕ್ಷೆಯಾಗಿದೆ. ಬಿಜೆಪಿಯು ನಾಟಕೀಯವಾಗಿ ಮುಖ್ಯಮಂತ್ರಿಯನ್ನು ಬದಲಿಸಿದೆ. ರಾಜ್ಯ ಸಭಾ ಸದಸ್ಯರಾಗಿರುವ ಶಹಾ ಅವರು ಸಹ ಬೇಗ ವಿಧಾನ ಸಭೆಗೆ ಬರಬೇಕಾಗಿದೆ. ಅವರ ಕ್ಷೇತ್ರ ಯಾವುದು ಎಂದು ಇನ್ನೂ ನಿರ್ಣಯವಾಗಿಲ್ಲ. ದಂತ ವೈದ್ಯ ಮತ್ತು ರಾಜಕಾರಣಿಯಾದ ಮಾಣಿಕ್ ಶಹಾ ಇಲ್ಲಿಯವರೆಗೆ ಯಾವುದೇ ಚುನಾವಣೆ ಸ್ಪರ್ಧಿಸಿದವರಲ್ಲ.
ಬರುವ ವರುಷ ಫೆಬ್ರವರಿಯಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯಬೇಕಾಗಿರುವುದರಿಂದ ಬಿಜೆಪಿಗೆ ಉಪ ಚುನಾವಣೆಗಳ ಗೆಲುವು ಅತಿ ಮುಖ್ಯವಾಗಿದೆ. ದೇಬ್ ರನ್ನು ದಿಢೀರನೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆದದ್ದು ಅವರ ಹಿಂಬಾಲಕರನ್ನು ಅತೃಪ್ತಿಗೀಡು ಮಾಡಿದೆ ಮತ್ತು ಕೆಲವು ರಾಜಕೀಯ ಕಹಿ ಘಟನೆಗಳು ಬಿಜೆಪಿಯನ್ನು ಆತಂಕಕ್ಕೆ ದೂಡಿವೆ. ಅಲ್ಲದೆ ಸತ್ತೆ ವಿರೋಧಿ ಅಲೆಯೂ ಬಿಜೆಪಿಗೆ ಬಾಧಕವಾಗಿದೆ.