ಬೆಂಗಳೂರು: ಆರೆಸ್ಸೆಸ್ ನವರು ಎಲ್ಲಿಂದ ಬಂದವರು ? ಅವರು ದ್ರಾವಿಡರಾ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ನೀಡಿದ ಹೇಳಿಕೆಗೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲಿಂದ ಬಂದಿದ್ದಾರೆ? ಅವರು ದ್ರಾವಿಡರಾ? ಆರ್ಯರಾ? ಅದನ್ನು ಮೊದಲು ಹೇಳಬೇಕು ಎಂದು ಸವಾಲು ಹಾಕಿದ್ದಾರೆ.
ಆರ್ ಎಸ್ ಎಸ್ ಮೂಲ ಕೆದಕಿದ್ದ ಸಿದ್ದರಾಮಯ್ಯ ಅವರಿಗೆ ಬಸವರಾಜ ಬೊಮ್ಮಾಯಿ ಈ ರೀತಿ ಮರು ಪ್ರಶ್ನೆ ಹಾಕಿದರು.
ಎಂಇಎಸ್ ಪುಡಾಂಟಿಕೆ ಖಂಡನೀಯ. ಈಗಾಗಲೇ ನಮ್ಮ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಯಾವುದೇ ತೊಂದರೆ ಆದರೂ ನಮ್ಮ ಸರ್ಕಾರ ಉಗ್ರ ಕ್ರಮ ಕೈಗೊಳ್ಳಲಿದೆ ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಶಿಕ್ಷಣ ಸಚಿವರು ಜೊತೆ ಮಾತನಾಡುತ್ತೇನೆ. ಏನೆಲ್ಲ ನಡೆದಿದೆ ಎಂದು ಅವರಿಗೆ ಗೊತ್ತು, ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಇದೇ ವೇಳೆ ಮಂಗಳೂರಿನಲ್ಲಿ ಹಿಜಾಬ್ ವಿವಾದ ವಿಚಾರವಾಗಿ, ನಿನ್ನೆ ಸಭೆ ನಡೆಸಿ ಎಲ್ಲ ಮುಗಿಸಿದ್ದಾರೆ. ಹಿಜಾಬ್ ವಿವಾದ ಮಾಡುವ ಅಗತ್ಯ ಇಲ್ಲ. ಕೋರ್ಟ್ ಹಾಗೂ ಸರ್ಕಾರದ ಆದೇಶ ಪಾಲನೆ ಮಾಡಬೇಕು. 99 ಶೇ ಪಾಲನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಅತ್ಯಂತ ಮುಖ್ಯ ಎಂದರು.
ರಾಜ್ಯ ಸರ್ಕಾರ ಪೆಟ್ರೋಲ್ ದರ ಕೆಡಿಮೆ ಮಾಡಲಿದೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಷ್ಟೇ ಉತ್ತರಿಸಿದರು.