ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ (59) ಹಾಲ್ಡ್ವಾನಿಯಲ್ಲಿರುವ ತನ್ನ ನಿವಾಸದ ಟ್ಯಾಂಕ್ ಹತ್ತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸೊಸೆ ಆರೋಪಿಸಿ ದೂರು ದಾಖಲಿಸಿದ ಮೂರು ದಿನಗಳ ಬಳಿಕ ರಾಜೇಂದ್ರ ಬಹುಗುಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಲ್ಡ್ವಾನಿಯಲ್ಲಿರುವ ತನ್ನ ಮನೆಯಿಂದ ಪೊಲೀಸ್ ನ ತುರ್ತು ದೂರವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದ ಬಹುಗುಣ, ಆತ್ಮಹತ್ಯೆ ಮಾಡಿಕೊಳ್ಳವ ಬಗ್ಗೆ ತಿಳಿಸಿ, ಪೊಲೀಸರು ಆಗಮಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘‘ಸೊಸೆಯ ಆರೋಪದಿಂದ ಅವರು ತೀವ್ರ ಖಿನ್ನತೆಗೊಳಗಾಗಿದ್ದರು’’ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ಭಟ್ ತಿಳಿಸಿದ್ದಾರೆ.
ಪೊಲೀಸರು ಆಗಮಿಸಿದಾಗ ಬಹುಗುಣ ಟ್ಯಾಂಕ್ ನ ಮೇಲೆ ನಿಂತು ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಲೌಡ್ ಸ್ವೀಕರ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವರಿಕೆ ಮಾಡಲು ಪೊಲೀಸರು ಹರಸಾಹಸ ಪಟ್ಟರೂ ಯಾವುದೇ ಫಲ ಕಾಣಲಿಲ್ಲ. ಒಮ್ಮೆ ಕೆಳಗಿಳಿಯಲು ನಿರ್ಧರಿಸಿದರೂ, ನಂತರ ಇದ್ದಕ್ಕಿದ್ದಂತೆ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೊಸೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಬಹುಗುಣ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು. ಸೊಸೆ, ಅವರ ತಂದೆ ಹಾಗೂ ನೆರೆಯವರು ಲೈಂಗಿಕ ಕಿರುಕುಳದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಹುಗುಣ ಅವರ ಪುತ್ರ ಅಜಯ್ ಬಹುಗುಣ ಹೇಳಿದ್ದಾರೆ.