ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ ಗೆ 1 ಸ್ಥಾನ
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ನ ಏಳು ಸ್ಥಾನಗಳಿಗೆ ಜೂನ್ 3 ರಂದು ನಿಗದಿಯಾಗಿದ್ದ ಚುನಾವಣೆಗೆ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿಗಳೂ ಆದ ವಿಶಾಲಾಕ್ಷಿ ಇಂದು ಘೋಷಿಸಿದರು.
ಮೇ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು, ಮೇ 25 ರಂದು ಪರಿಶೀಲನೆ ಹಾಗೂ ಮೇ 27 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. ಏಳು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಮಾತ್ರ ಅಂತಿಮ ಕಣದಲ್ಲಿ ಉಳಿದಿದ್ದ ಕಾರಣಕ್ಕೆ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸವದಿ ಲಕ್ಷ್ಮಣ, ಟಿ. ನಾರಾಯಣ ಸ್ವಾಮಿ, ಹೇಮಾಲತಾ ನಾಯಕ ಹಾಗೂ ಕೇಶವ ಪ್ರಸಾದ.ಎಸ್. ಭಾರತೀಯ ಕಾಂಗ್ರೆಸ್ ಪಕ್ಷದಿಂದ ಕೆ.ಅಬ್ದುಲ್ ಜಬ್ಬಾರ್ ಹಾಗೂ ಎಮ್. ನಾಗರಾಜು. ಜೆಡಿಎಸ್ ಪಕ್ಷದಿಂದ ಶರವಣನ್.ಟಿ ಅವರು ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ.
ಇಂದು ನಾಮಪತ್ರ ಹಿಂಪಡೆಯುವ ಸಮಯ ಮೀರಿದ ನಂತರ ನಾಮಪತ್ರ ಸಲ್ಲಿಸಿದ್ದ 7 ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿಗಳೂ ಆದ ವಿಶಾಲಾಕ್ಷಿ ಅವರು ಅವಿರೋಧ ಆಯ್ಕೆಯ ಪ್ರಮಾಣ ಪತ್ರಗಳನ್ನು ವಿತರಿಸಿದರು.