ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ 4 ವರ್ಷ ಜೈಲು, ಆಸ್ತಿ ಮುಟ್ಟುಗೋಲು

Prasthutha|

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರಿಗೆ ದೆಹಲಿಯ ಸಿಬಿಐ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಅಲ್ಲದೆ, ಚೌಟಾಲಾ ಗೆ ಸೇರಿರುವ ನಾಲ್ಕು ಕಡೆಗಳಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶಿಸಿದೆ.
1993ರಿಂದ 2006ರವರೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿರುವ ಓಂ ಪ್ರಕಾಶ್ ಚೌಟಾಲಾ ಹಾಗೂ ಸಿಬಿಐ ಪರ ವಕೀಲರ ವಾದವನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ನಿನ್ನೆ ಆಲಿಸಿದ್ದರು. ಶಿಕ್ಷೆಯ ಪ್ರಮಾಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಓಂ ಪ್ರಕಾಶ್ ಚೌಟಾಲಾ ಅವರ ವೈದ್ಯಕೀಯ ಕಾಯಿಲೆಗಳು ಮತ್ತು ವೃದ್ಧಾಪ್ಯವನ್ನು ಉಲ್ಲೇಖಿಸಿ ಅವರ ವಕೀಲರು ಅವರಿಗೆ ಕನಿಷ್ಠ ಶಿಕ್ಷೆಯನ್ನು ನೀಡಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದ್ದರು.
ಆದರೆ ಓಂ ಪ್ರಕಾಶ್ ಚೌತಾಲಾ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಸಿಬಿಐ ಕೋರಿದ್ದು, ಇದು ಸಮಾಜಕ್ಕೆ ಸಂದೇಶವನ್ನು ನೀಡುತ್ತದೆ ಎಂದು ಹೇಳಿತ್ತು.
ಇಂದು ತೀರ್ಪು ನೀಡಿದ ನ್ಯಾಯಾಲಯ, ಚೌತಾಲಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ಹಾಗೂ ಆಸ್ತಿ ಮುಟ್ಟುಗೋಳು ಮಾಡಲು ಆದೇಶಿಸಿದೆ. ನ್ಯಾಯಾಲಯವು ಕಳೆದ ವಾರವೇ ಓಂ ಪ್ರಕಾಶ್ ಚೌತಾಲಾ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.



Join Whatsapp