ತುಮಕೂರು: ಪ್ರಾಣದ ಹಂಗು ತೊರೆದು ವ್ಯಕ್ತಿಯೋರ್ವನ ರಕ್ಷಣೆಗೆ ಧಾವಿಸಿ, ತೀವ್ರವಾಗಿ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಪೊಲೀಸ್ ಸಿಬ್ಬಂದಿಗೆ ತಲಾ ಎರಡು ಲಕ್ಷ ರೂಪಾಯಿಗಳ ಸಹಾಯಧನವನ್ನು ಇಲಾಖೆ ವತಿಯಿಂದ ಬಿಡುಗಡೆ ಗೊಳಿಸಿ ಆದೇಶ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ತುಮಕೂರು ಜಿಲ್ಲೆಯ ಲಿಂಗನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ರಕ್ಷಿಸಲು ಹೋದ ಇಬ್ಬರು ಪೊಲೀಸ್ ಕಾನಸ್ಟೇಬಲ್ ಗಳಿಗೆ ತೀವ್ರ ಸುಟ್ಟ ಗಾಯಗಳಾಗಿದೆ. ಇದೀಗ ಗಾಯಗೊಂಡ ಆ ಪೊಲೀಸರಿಬ್ಬರಿಗೆ ಸಹಾಯಧನ ಘೋಷಿಸಲಾಗಿದೆ.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಶ್ರೀ ರಾಹುಲ್ ರವರು ಗಾಯಾಳು ಪೊಲೀಸರನ್ನು ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರವಾಗಿ ಸುಟ್ಟ ಗಾಯಗಳಿಂದ ಅಸ್ಪತ್ರೆಗೆ ದಾಖಲಾದ ಕಾನ್ಸ್ಟೇಬಲ್ ಗಳು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.