ಕೊಡಗು: ಕುಶಾಲನಗರದ ಕೂಡಿಗೆ ಗ್ರಾಮ ಪಂಚಾಯಿತಿಗೆ ಸೇರಿದ ಗಣಪತಿ ಪೆಂಡಾಲ್ ನಲ್ಲಿ ವಾಸಿಸುತ್ತಿದ್ದ 3ಜನ ಅನಾಥರನ್ನು ಕರವೇ ಕಾರ್ಯಕರ್ತರು ರಕ್ಷಣೆ ಮಾಡಿ, ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಸೇರಿಸಿದ್ದಾರೆ.
ಅನೇಕ ವರ್ಷದಿಂದ ಪೆಂಡಾಲ್ ನಲ್ಲಿ ಮಲಗುತ್ತಿದ್ದ ಅನಾಥರನ್ನು ಗಮನಿಸಿದ ಪತ್ರಕರ್ತ ಗಣೇಶ್, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಪುನೀತ್ ಮತ್ತು ಪತ್ರಕರ್ತ ಗಣೇಶ್ ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಕಾರ್ಯ ಪ್ರವೃತರಾದ ಫ್ರಾನ್ಸಿಸ್ ಡಿಸೋಜಾ ರವರು ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಸೇರಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಒಪ್ಪಿಸಿ, ಪಂಚಾಯಿತಿಯ ದೃಢೀಕರಣ ಪತ್ರದೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಸೇರಿಸಿದ್ದಾರೆ.
ಒಬ್ಬ ಮಹಿಳೆ ಸೇರಿದಂತೆ ಮೂವರು ಅನಾಥರನ್ನು ರಕ್ಷಿಸಲಾಗಿದೆ. ಮಹಿಳೆಗೆ ಏಳಲು ಸಹ ಆಗದೆ ಮಲಗಿದ ಜಾಗದಲ್ಲೇ ಇದ್ದರು. ಇನ್ನೊಬ್ಬ ವೃದ್ಧ ಕುರುಡರಾಗಿದ್ದರು. ಇದನ್ನೆಲ್ಲ ನೋಡಿ ಮನಕರಗಿದ ಕರವೇ ಕಾರ್ಯಕರ್ತರು ಮೂವರನ್ನೂ ಬೆಂಗಳೂರು ಆಟೋರಾಜ ಫೌಂಡೇಶನ್ ಅನಾಥಾಶ್ರಮಕ್ಕೆ ಸೇರಿಸಿದ್ದಾರೆ.