ಹಾಸನ: ಆಟೋ ಮೇಲೆ ಉರುಳಿದ ಮರ; ಇಬ್ಬರಿಗೆ ಗಾಯ

Prasthutha|

ಹಾಸನ: ರಸ್ತೆ ಪಕ್ಕದಲ್ಲಿದ್ದ ಭಾರೀ ಗಾತ್ರದ ಮರವೊಂದು ದಿಢೀರ್ ಬುಡ ಸಮೇತ ಕಿತ್ತು ಆಟೋ ಮೇಲೆ ಉರುಳಿ ಬಿದ್ದ ಘಟನೆ ನಗರದ ಕೆ.ಆರ್.ಪುರಂ ನ 3ನೇ ಅಡ್ಡರಸ್ತೆಯಲ್ಲಿ ಇಂದು ಮಧ್ಯಾಹ್ನನಡೆದಿದೆ.

- Advertisement -

ಮರ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಕಾರೊಂದಕ್ಕೆ ಹಾನಿಯಾಗಿದೆ. ಮರ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಮೈ ಜುಮ್ಮೆನ್ನಿಸುವಂತಿದೆ.

ಅದೃಷ್ಟವಶಾತ್  ಆಟೋದಲ್ಲಿದ್ದ ಜಬೀನಾ, ಜುನೈದ್‌ಗೆ ಎಂಬವರು  ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

- Advertisement -

ಜಬೀನಾ ಮತ್ತು ಜುನೈದ್ ತನ್ಯ ಆಸ್ಪತ್ರೆ ಎದುರಿನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಪರೀಕ್ಷೆ ಮಾಡಿಸಲೆಂದು ಚಿಕ್ಕಮಗಳೂರಿನಿಂದ ಹಾಸನಕ್ಕೆ ಆಟೋದಲ್ಲಿ ಆಗಮಿಸಿದ್ದರು. ಆಸ್ಪತ್ರೆಯಲ್ಲಿ ರಶೀದಿ ಪಡೆದು ಸ್ಕ್ಯಾನಿಂಗ್ ಸೆಂಟರ್ ಎದುರು ಆಟೋದಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿರುವಾಗ ಘಟನೆ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ  ಅಧ್ಯಕ್ಷ ಆರ್.ಮೋಹನ್, ಅರಣ್ಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಾವು ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜೋರು ಮಳೆಗೆ ಕೆಲವೆಡೆ ಹಳೆಯ ಕಾಲದ ಮರಗಳು ಮುರಿದು ಬಿದ್ದಿದ್ದವು. ಇದು ಮರುಕಳಿಸಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ನಗರಸಭೆಯಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ನಗರ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳನ್ನು ಗುರುತಿಸಿ ತಕ್ಷಣ ತೆರವುಗೊಳಿಸಿ ಎಂದು ಸೂಚನೆ ನೀಡಲಾಗಿತ್ತು. ಸಾರ್ವಜನಿಕರ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟ ಆಗದಂತೆ ತಕ್ಷಣವೇ ಹಳೆಯ ಮರಗಳನ್ನು ತೆರವು ಮಾಡಿ ಎಂದು 2021 ಜೂನ್, ಜುಲೈನಲ್ಲೇ ಹೇಳಿದ್ದರೂ, ಆ ನಿಟ್ಟಿನಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಇಂದು ಮರ ಬಿದ್ದಿರುವುದಕ್ಕೂ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅಕಸ್ಮಾತ್ ಹೆಚ್ಚಿನ ಅನಾಹುತವಾಗಿದ್ದರೆ ಯಾರು ಹೊಣೆ ಎಂದ ಅವರು, ಇನ್ನಾದರೂ ಕೂಡಲೇ ಎಚ್ಚೆತ್ತು ರಸ್ತೆ ಇರುವ ಅಪಾಯಕಾರಿ ಮರಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದರು. ಮಳೆಗಾಲ ಆರಂಭವಾಗುತ್ತಿದ್ದು, ಮುಂದೆ ಈ ರೀತಿಯ ಪ್ರಕರಣ ಮರುಕಳಿಸದಂತೆ ಗಮನ ಹರಿಸಿ ಎಂದು ಸೂಚಿಸಿದರು.



Join Whatsapp