ಹುಬ್ಬಳ್ಳಿ- ಧಾರವಾಡ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ; 7 ಸಾವು , 26 ಮಂದಿಗೆ ಗಾಯ

Prasthutha|

ಹುಬ್ಬಳ್ಳಿ:  ‌ಕೊಲ್ಹಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ಬಸ್ ಮತ್ತು ಬೆಂಗಳೂರಿನಿಂದ ಪುಣೆಯ ಕಡೆ ಹೊರಟಿದ್ದ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿ ಪರಸ್ಪರ  ಡಿಕ್ಕಿಯಾಗಿರುವ  ಘಟನೆ ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ನಲ್ಲಿ ನಡೆದಿದೆ.

- Advertisement -

ಘಟನೆಯಲ್ಲಿ ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಸಹಿತ  ಮೂವರು ಮತ್ತು  ಖಾಸಗಿ ಬಸ್ ನಲ್ಲಿದ್ದ ನಾಲ್ವರು ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. 26 ಮಂದಿಗೆ ಗಂಭೀರ ಗಾಯಗಳಾಗಿದ್ದು,  ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಿ ತನಿಖೆಯನ್ನು ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಹುಬ್ಬಳ್ಳಿ ಹೊರ ವಲಯದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸಾವನ್ನಪ್ಪಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಳೆದ ತಡರಾತ್ರಿ ಸಂಭವಿಸಿರುವ ಈ ದುರಂತದಲ್ಲಿ 26 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ದುರಂತದಲ್ಲಿ ಅಸುನೀಗಿದ ನತದೃಷ್ಟರೆಲ್ಲರಿಗೂ ಚಿರಶಾಂತಿ ಸಿಗಲಿ ಹಾಗೂ ಆವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ, ಗಾಯಾಳುಗಳೆಲ್ಲ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

ಅಪಘಾತ ಸಂಭವಿಸಿದ ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿಯ ಈ ಜಾಗದಲ್ಲಿ ಪದೇಪದೆ ದುರಂತಗಳು ಸಂಭವಿಸುತ್ತಿವೆ, ಅದು ‘ಸಾವಿನ ಹೆದ್ದಾರಿ’ ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಮತ್ತೆಅಪಘಾತಗಳು ಸಂಭವಿಸದಂತೆ ತಡೆಯಬೇಕು ಎಂದು ತಿಳಿಸಿದ್ದಾರೆ.



Join Whatsapp