ಹೊಸದಿಲ್ಲಿ: ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲ ಎಂದಾದ ಮೇಲೆ ಆಕ್ರಮಣದ ಸಮಯದಲ್ಲಿ ನೆಲಸಮವಾದ ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹಿಂದು ಧರ್ಮದ ಆಧ್ಯಾತ್ಮಿಕ ನಾಯಕ ಸದ್ಗುರು ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, “ಆಕ್ರಮಣಗಳ ಸಮಯದಲ್ಲಿ ಸಾವಿರಾರು ದೇವಾಲಯಗಳನ್ನು ನೆಲಸಮಗೊಳಿಸಲಾಯಿತು. ಆಗ ನಾವು ಅವುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈಗ ಅವುಗಳ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಏಕೆಂದರೆ ನಾವು ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
“ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಒಂದು ಸಮಯದಲ್ಲಿ ಒಂದು ವಿಚಾರವನ್ನೇ ಚರ್ಚಿಸುವ ಬದಲು, ಸಮುದಾಯಗಳ ನಡುವಿನ ವಿವಾದ ಮತ್ತು ಅನಗತ್ಯ ದ್ವೇಷವನ್ನು ಜೀವಂತವಾಗಿಡುವ ಬದಲು ಒಟ್ಟಿಗೆ ಕುಳಿತು ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಕೆಲವು ಕೊಡು- ಕೊಳ್ಳುವಿಕೆಯೂ ನಡೆಯಬೇಕು. ಇದು ರಾಷ್ಟ್ರದ ಅಭಿವೃದ್ಧಿಯ ಮುಂದಿನ ದಾರಿ. ನಾವು ಹಿಂದೂ ಮುಸ್ಲಿಂ ಸಮುದಾಯ ಎಂಬ ವಿಚಾರವನ್ನೇ ಯೋಚಿಸಬಾರದು.” ಎಂದು ಅವರು ಹೇಳಿದರು.
ಜ್ಞಾನವಾಪಿ ಮಸೀದಿ ವಿವಾದದ ಬಗ್ಗೆ ತಾನು ಅಪ್ ಡೇಟ್ ಆಗಿಲ್ಲ. ಭಾರತವು ಈ ಸಮಯದಲ್ಲಿ ನಿರ್ಣಾಯಕ ಹಂತದಲ್ಲಿದೆ. ಈ ಹಂತದಲ್ಲಿ ನಾವು ಸರಿಯಾಗಿ ಕೆಲಸ ಮಾಡಿದರೆ, ಭಾರತವು ವಿಶ್ವದಲ್ಲಿ ಮಹತ್ವದ ಶಕ್ತಿಯಾಗಬಹುದು. ಎಲ್ಲವನ್ನೂ ದೊಡ್ಡ ವಿವಾದವನ್ನಾಗಿ ಮಾಡುವ ಮೂಲಕ ನಾವು ಅದನ್ನು ಹಾಳುಮಾಡಬಾರದು. ಮಂದಿರ-ಮಸ್ಜಿದ್ ವಿವಾದಗಳನ್ನು ತೀವ್ರ ಸ್ವರೂಪಗೊಳಿಸದಂತೆ ಜನರೊಂದಿಗೆ ಮತ್ತು ಸುದ್ದಿ ಸಂಸ್ಥೆಗಳೊಂದಿಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.