ಸಿದ್ದಾಪುರ: ಮದುವೆ ದಿಬ್ಬಣಕ್ಕೆ ಕರೆದೊಯ್ಯುತ್ತಿದ್ದ ಕಾರು ಹಾಗೂ ಎದುರಿನಿಂದ ಬಂದ ಮತ್ತೊಂದು ಕಾರಿನ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸಿದ್ದಾಪುರ ತಾಲೂಕಿನ ಶಿರೂರು ಬಳಿ ನಡೆದಿದೆ.
ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ ಬಿ ಗೌಡ ಕಬ್ಬಿನ್ಮನೆ ಮೃತಪಟ್ಟವರು. ಗಾಯಗೊಂಡಿರುವ 8ಮಂದಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರಾವಾರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಮದುವೆ ಮುಗಿಸಿ ದಿಬ್ಬಣದ ಜನರು ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.