ನವದೆಹಲಿ: ದಿನೇ ದಿನೇ ಗಗನಕ್ಕೇರಿದ್ದ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ಹಾಗೂ 6ರಷ್ಟು ಕಡಿತ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 8 ರಷ್ಟು ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 6 ರಷ್ಟು ಕಡಿಮೆ ಮಾಡುತ್ತಿದ್ದೇವೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 9.5, ಡೀಸೆಲ್ ಬೆಲೆ 7 ರೂಪಾಯಿ ನಷ್ಟು ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು. ಈ ವರ್ಷ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ ಗೆ (12 ಸಿಲಿಂಡರ್ ಗಳವರೆಗೆ) 200 ರೂ.ಗಳ ಸಬ್ಸಿಡಿಯನ್ನು ನಾವು ನೀಡಲಿದ್ದೇವೆ ಎಂದು ಸಚಿವರು ಘೋಷಿಸಿದರು
ಪೆಟ್ರೋಲ್ ಬೆಲೆ 9 ರೂಪಾಯಿ 50 ಪೈಸೆ ಹಾಗೂ ಡೀಸಲ್ ದರ ಪ್ರತಿ ಲೀಟರ್ ಗೆ 7 ರೂಪಾಯಿ ಕಡಿಮೆಯಾಗಲಿದೆ. ಈ ತೀರ್ಮಾನದಿಂದ ಪ್ರತಿವರ್ಷ ಸರ್ಕಾರಕ್ಕೆ 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಅಡುಗೆ ಅನಿಲ ಸಿಲಿಂಡರ್ ಪಡೆದಿರುವ ಕುಟುಂಬಗಳಿಗೆ ವಾರ್ಷಿಕ 12 ಸಿಲಿಂಡರ್ಗಳ ಮಿತಿ ನಿಗದಿ ಪಡಿಸಿದ್ದು, ಪ್ರತಿ ಸಿಲಿಂಡರ್ಗೆ 200 ರೂಪಾಯಿ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ ಇದರಿಂದ ಸರ್ಕಾರಕ್ಕೆ ಪ್ರತಿವರ್ಷ 6 ಸಾವಿರದ 100 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಿದ್ದಾರೆ.
ಕಬ್ಬಿಣ, ಉಕ್ಕು, ಪ್ಲಾಸ್ಟಿಕ್ ಉತ್ಪನ್ನಗಳಿಗೆ ಕಸ್ಟಂ ಸುಂಕವನ್ನು ಸಹ ತಗ್ಗಿಸಲಾಗಿದ್ದು, ಸಿಮೆಂಟ್ ಲಭ್ಯತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.